ಮುಂಬೈ: ಐಪಿಎಲ್ 2024 ರಲ್ಲಿ ಇಂದು ಮುಂಬೈ ಇಂಡಿಯನ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮಹತ್ವದ ಪಂದ್ಯ ಆಡಲಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ.
ಇಂದಿನ ಪಂದ್ಯದ ಬಳಿಕ ಮುಂಬೈ ಇಂಡಿಯನ್ಸ್ ಈ ಐಪಿಎಲ್ ನ ಪ್ಲೇ ಆಫ್ ರೇಸ್ ನಿಂದ ಅಧಿಕೃತವಾಗಿ ಹೊರಬಿದ್ದಂತಾಗಲಿದೆ. ಇದುವರೆಗೆ 11 ಪಂದ್ಯಗಳನ್ನಾಡಿರುವ ಮುಂಬೈ ಗೆದ್ದಿರುವುದು ಕೇವಲ 3 ಪಂದ್ಯಗಳನ್ನು ಮಾತ್ರ. ಐದು ಬಾರಿಯ ಚಾಂಪಿಯನ್ ತಂಡ ಈ ಬಾರಿ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದೆ.
ಕಳೆದ ನಾಲ್ಕು ಪಂದ್ಯಗಳಲ್ಲಿ ಸತತವಾಗಿ ಸೋತಿರುವ ಮುಂಬೈ ಇದೀಗ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಬಾರಿ ಮುಂಬೈ ಕಳಪೆ ನಾಯಕತ್ವ, ಬ್ಯಾಟಿಂಗ್ ಗೆ ತಕ್ಕ ಬೆಲೆ ತೆತ್ತಿದೆ. ಕಳೆದ ನಾಲ್ಕೂ ಪಂದ್ಯಗಳಲ್ಲಿ ಟಾಪ್ ಆರ್ಡರ್ ಬ್ಯಾಟಿಗರು ಖ್ಯಾತಿಗೆ ತಕ್ಕ ಆಟವಾಡುವಲ್ಲಿ ವಿಫಲರಾಗಿದ್ದಾರೆ. ಇತ್ತ ಬೌಲರ್ ಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳದ ಹಾರ್ದಿಕ್ ಸೋತು ಸುಣ್ಣವಾಗಿದ್ದಾರೆ.
ಇತ್ತ ಸನ್ ರೈಸರ್ಸ್ ಹೈದರಾಬಾದ್ ತಂಡ ಎರಡು ತಂಡಗಳಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ಮಂಕಾಗಿತ್ತು. ಆದರೆ ಕಳೆದ ಪಂದ್ಯದಲ್ಲಿ ಪ್ರಬಲ ರಾಜಸ್ಥಾನ್ ವಿರುದ್ಧ ಕೇವಲ 1 ರನ್ ನಿಂದ ಸೋತಿದ್ದ ಹೈದರಾಬಾದ್ ಈಗ ಟಾಪ್ 3 ರೊಳಗೆ ಮತ್ತೆ ಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿದೆ. ಸದ್ಯಕ್ಕೆ 10 ಪಂದ್ಯಗಳಿಂದ 6 ಗೆಲುವು ಕಂಡಿರುವ ಹೈದರಾಬಾದ್ ನಾಲ್ಕನೇ ಸ್ಥಾನದಲ್ಲಿದೆ. ಪ್ಲೇ ಆಫ್ ದೃಷ್ಟಿಯಿಂದ ಇದು ನಿರ್ಣಾಯಕ ಘಟ್ಟವಾಗಿದ್ದು ಹೈದರಾಬಾದ್ ಗೆಲುವಿನ ಒತ್ತಡದಲ್ಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.