ಮುಂಬೈ: ಐಪಿಎಲ್ 2024 ರಲ್ಲಿ ಇದು ಎರಡನೇ ಬಾರಿಗೆ ಟಾಸ್ ವೇಳೆ ಮ್ಯಾಚ್ ರೆಫರಿಯಿಂದ ಕಾಯಿನ್ ವಿಚಾರದಲ್ಲಿ ತಾರತಮ್ಯ ಮಾಡಿದ ಆರೋಪ ಕೇಳಿಬಂದಿದೆ. ಮುಂಬೈ ಇಂಡಿಯನ್ಸ್ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಕೆಕೆಆರ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಟಾಸ್ ಕಾಯಿನ್ ಚಿಮ್ಮಿಸಿದರು. ಈ ವೇಳೆ ಅದು ಸ್ವಲ್ಪ ದೂರ ಎಗರಿ ಬಿತ್ತು. ಬಿದ್ದ ಕಾಯಿನ್ ನನ್ನು ಕ್ಯಾಮರಾಗಳು ಮೊದಲು ಝೂಮ್ ಮಾಡಿ ತೋರಿಸುತ್ತವೆ.
ಆದರೆ ಈ ಪಂದ್ಯದಲ್ಲಿ ಕ್ಯಾಮರಾ ಫೋಕಸ್ ಮಾಡುವ ಮೊದಲೇ ಮ್ಯಾಚ್ ರೆಫರಿ ಕಾಯಿನ್ ತೆಗೆದು ಹಾರ್ದಿಕ್ ಟಾಸ್ ಗೆದ್ದರು ಎಂದು ಘೋಷಿಸಿದ್ದಾರೆ. ಇದು ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ. ಮ್ಯಾಚ್ ರೆಫರಿ ಮತ್ತೊಮ್ಮೆ ಮುಂಬೈಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಇದಕ್ಕೆ ಮೊದಲು ಮುಂಬೈ ಮತ್ತು ಆರ್ ಸಿಬಿ ನಡುವಿನ ಪಂದ್ಯದಲ್ಲಿ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಕೂಡಾ ಮುಂಬೈ ತಂಡಕ್ಕೆ ಅನುಕೂಲ ಮಾಡಿಕೊಟ್ಟ ಆರೊಪಕ್ಕೊಳಗಾಗಿದ್ದಾರು. ಆ ಪಂದ್ಯದಲ್ಲಿ ಟಾಸ್ ಆರ್ ಸಿಬಿ ಪರವಾಗಿ ಬಿತ್ತು. ಆದರೆ ಶ್ರೀನಾಥ್ ಕಾಯಿನ್ ಹೆಕ್ಕುವಾಗ ಅದನ್ನು ತಿರುಗಿಸಿ ಮುಂಬೈ ಗೆದ್ದಿದೆ ಎಂದು ಘೋಷಿಸಿದ್ದರು ಎಂದು ಆರೋಪಿಸಲಾಗಿತ್ತು. ಟಿವಿ ರಿಪ್ಲೇಗಳಲ್ಲಿ ಕಾಯಿನ್ ತಿರುಗಿಸಿದ್ದು ಸ್ಪಷ್ಟವಾಗಿತ್ತು. ಇದರ ಬಗ್ಗೆ ಆರ್ ಸಿಬಿ ನಾಯಕ ಫಾ ಡು ಪ್ಲೆಸಿಸ್ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮತ್ತೊಮ್ಮೆ ಮುಂಬೈಗೆ ಅನುಕೂಲವಾಗುವಂತೆ ಮಾಡಿದ್ದಾರೆ ಎಂದು ರೆಫರಿ ಮೇಲೆ ಆರೋಪ ಕೇಳಿಬಂದಿದೆ.