ಬೆಂಗಳೂರು: ಮೇ 18 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಮಹತ್ವದ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಆರ್ ಸಿಬಿಗೆ ಮಳೆಯ ಭಯ ಶುರುವಾಗಿದೆ.
ಇದು ಆರ್ ಸಿಬಿ ಮತ್ತು ಚೆನ್ನೈ ಪಾಲಿಗೆ ಕೊನೆಯ ಲೀಗ್ ಪಂದ್ಯವಾಗಿದೆ. ಈ ಪಂದ್ಯದಲ್ಲಿ ರನ್ ರೇಟ್ ಕಾಯ್ದುಕೊಂಡು ಗೆದ್ದರೆ ಮಾತ್ರ ಆರ್ ಸಿಬಿಗೆ ಪ್ಲೇ ಆಫ್ ಗೇರುವ ಅವಕಾಶ ಸಿಗಲಿದೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಅಥವಾ ಸೋತರೆ ಟೂರ್ನಿಯಿಂದಲೇ ಹೊರ ನಡೆಯಬೇಕಾಗುತ್ತದೆ.
ಆರಂಭಿಕ ಪಂದ್ಯಗಳಲ್ಲಿ ಸೋಲುತ್ತಾ ಬಂದ ಆರ್ ಸಿಬಿ ಇದೀಗ ಫೀನಿಕ್ಸ್ ನಂತೆ ಎದ್ದು ನಿಂತು ಸತತ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದೇ ರೋಚಕವಾಗಿತ್ತು. ಇದೇ ಉತ್ಸಾಹದಲ್ಲಿ ಕೊನೆಯ ಲೀಗ್ ಪಂದ್ಯವನ್ನೂ ಗೆದ್ದು ಆರ್ ಸಿಬಿ ಪ್ಲೇ ಆಫ್ ಗೇರುವ ಸಾಧನೆ ಮಾಡುವ ಹುಮ್ಮಸ್ಸಿನಲ್ಲಿದೆ.
ಇದಕ್ಕಾಗಿ ಈ ಪಂದ್ಯವನ್ನು ಆರ್ ಸಿಬಿ 18 ರನ್ ಗಳ ಅಂತರ ಅಥವಾ 18 ಓವರ್ ಗಳಲ್ಲಿ ಪಂದ್ಯ ಗೆದ್ದರೆ ಸಾಕು. ಇದು ತವರು ಬೆಂಗಳೂರಿನಲ್ಲಿ ನಡೆಯುವ ಪಂದ್ಯವಾಗಿರುವುದರಿಂದ ಆರ್ ಸಿಬಿಗೆ ಒಳ್ಳೆಯ ಅವಕಾಶವಿತ್ತು. ಆದರೆ ಶನಿವಾರದಂದು ಬೆಂಗಳೂರಿನಲ್ಲಿ ಶೇ.90 ರಷ್ಟು ಮಳೆ ಬರುವ ಸಾಧ‍್ಯತೆಯಿದೆ ಎಂದು ಹವಾಮಾನ ವರದಿ ಹೇಳುತ್ತಿದೆ. ಅದರಲ್ಲೂ ಅಪರಾಹ್ನದ ನಂತರ ರಾತ್ರಿ 9 ರವರೆಗೆ ಮಳೆಯಾಗುವ ಸಾಧ‍್ಯತೆಯಿದೆ ಎಂದು ಸೂಚಿಸುತ್ತಿದೆ. ಮಳೆ ಬಂದರೆ ಆರ್ ಸಿಬಿ ಕನಸಿಗೆ ತಣ್ಣೀರೆರಚಿದಂತಾಗಲಿದೆ. ಹೀಗಾಗಿ ಇಷ್ಟು ದಿನ ಮಳೆ ಬಂದರೆ ಸಾಕು ಎಂದು ಪ್ರಾರ್ಥಿಸುತ್ತಿದ್ದ ಅಭಿಮಾನಿಗಳು ಈಗ ಮಳೆ ಬಾರದೇ ಇದ್ದರೆ ಸಾಕು ಎಂದು ಪ್ರಾರ್ಥಿಸುವಂತಾಗಿದೆ.