ಮುಂಬೈ: ಐಪಿಎಲ್ 2024 ರಲ್ಲಿ ಕಳಪೆ ಫಾರ್ಮ್ ನಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಗ ರಜತ್ ಪಾಟೀದಾರ್ ನಿನ್ನೆಯ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದರು.
ಇಷ್ಟು ದಿನ ಕಳಪೆ ಫಾರ್ಮ್ ನಲ್ಲಿದ್ದ ಕಾರಣಕ್ಕೆ ರಜತ್ ಪಾಟೀದಾರ್ ರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಲಾಗುತ್ತಿತ್ತು. ಅವರೊಬ್ಬ ವೇಸ್ಟ್ ಬಾಡಿ, ಮುಂದಿನ ಪಂದ್ಯದಿಂದ ಕಿತ್ತೊಗೆಯಬೇಕು ಎಂಬಿತ್ಯಾದಿ ಟೀಕೆಗಳು ನೆಟ್ಟಗರಿಂದ ಕೇಳಿಬರುತ್ತಿತ್ತು. ಆದರೆ ನಿನ್ನೆಯ ಪಂದ್ಯದಲ್ಲಿ ತಂಡಕ್ಕೆ ಅವರೇ ಆಪತ್ ಬಾಂಧವರಾಗಿದ್ದರು.
ಕೇವಲ 25 ಎಸೆತಗಳಿಂದ ರಜತ್ ನಿನ್ನೆ 50 ರನ್ ಸಿಡಿಸಿದ್ದರು. ಇಷ್ಟು ದಿನ ಮಂಕಾಗಿದ್ದ ರಜತ್ ನಿನ್ನೆ ಇದ್ದಕ್ಕಿದ್ದಂತೆ ಸಿಡಿದಿದ್ದು ನೋಡಿ ಅಭಿಮಾನಿಗಳಿಗೆ ಖುಷಿಯೇನೋ ಆಯಿತು. ಆದರೆ ಅವರು ಚೆನ್ನಾಗಿ ಆಡಿದರೂ ನೆಟ್ಟಿಗರು ಅವರನ್ನು ಟ್ರೋಲ್ ಮಾಡುವುದನ್ನು ಮಾತ್ರ ಬಿಡಲಿಲ್ಲ.
ಅಬ್ಬಾ ಅಂತೂ ಬ್ಯಾಟಿಂಗ್ ಮಾಡಿದೆಯಲ್ಲಾ ಎಂದು ಮೀಮ್ಸ್ ಗಳ ಮೂಲಕ ಪಾಟೀದಾರ್ ರನ್ನು ಕಾಲೆಳೆದಿದ್ದಾರೆ. ಅದೂ ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್ ಕಳಪೆ ಮೊತ್ತಕ್ಕೆ ಔಟಾದಾಗ ಪಾಟೀದಾರ್ ತಂಡದ ಕೈ ಹಿಡಿದಿದ್ದರು. ಅವರಿಂದ ಅಭಿಮಾನಿಗಳು ನಿರೀಕ್ಷಿಸುವುದೂ ಇಂತಹದ್ದೇ ಆಟವನ್ನು.