ಮುಂಬೈ: ಐಪಿಎಲ್ 2024 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಔಟಾದ ಬೇಸರದಲ್ಲಿ ಕಣ್ಣೀರು ಹಾಕಿದ್ದಾರೆ. ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮುಂಬೈ ಇಂಡಿಯನ್ಸ್ ತಂಡ ಈ ಪಂದ್ಯವನ್ನು 7 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. ಸೂರ್ಯಕುಮಾರ್ ಯಾದವ್ ಶತಕ ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಆದರೆ ಇದಕ್ಕೆ ಮೊದಲು ತಂಡಕ್ಕೆ ಅಗ್ರ ಕ್ರಮಾಂಕ ಕೈ ಕೊಟ್ಟಿತು. ರೋಹಿತ್ ಶರ್ಮಾ ಕೇವಲ 4 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.
ತಂಡಕ್ಕೆ ಅನಿವಾರ್ಯವಾಗಿದ್ದಾಗ ಕೇವಲ 4 ರನ್ ಗಳಿಗೆ ಔಟಾಗಿ ಪೆವಿಲಿಯನ್ ಗೆ ಸೇರಿಕೊಂಡಿದ್ದು ರೋಹಿತ್ ದುಃಖಕ್ಕೆ ಕಾರಣವಾಗಿತ್ತು. ಪೆವಿಲಿಯನ್ ನಲ್ಲಿ ಬೇಸರದಲ್ಲಿ ಕುಳಿತಿದ್ದ ರೋಹಿತ್ ಕಣ್ಣೀರು ಒರೆಸುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಐಪಿಎಲ್ ನ ಕಳೆದ ನಾಲ್ಕು ಪಂದ್ಯಗಳಿಂದ ರೋಹಿತ್ ಪ್ರದರ್ಶನ ಕಳಪೆಯಾಗಿತ್ತು. ಆದರೆ ಇದೇ ಕೂಟದಲ್ಲಿ ಅವರು ಒಂದು ಶತಕ ಸಿಡಿಸಿ ಮಿಂಚಿದ್ದರು. ಆದರೆ ಅದು ಬಿಟ್ಟರೆ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿರಲಿಲ್ಲ. ಈ ಬಾರಿ ನಾಯಕತ್ವದ ಒತ್ತಡವಿಲ್ಲದ ಕಾರಣ ರೋಹಿತ್ ಬ್ಯಾಟಿಂಗ್ ನಲ್ಲಿ ಮಿಂಚಬಹುದು ಎಂದು ಎಲ್ಲರ ನಿರೀಕ್ಷೆಯಾಗಿತ್ತು.