ಮುಂಬೈ: ಟೀಂ ಇಂಡಿಯಾ ಪರ ಇರಲಿ, ಐಪಿಎಲ್ ಇರಲಿ, ಮೈದಾನದಲ್ಲಿ ಫೀಲ್ಡಿಂಗ್ ಮಾಡುವಾಗ ರೋಹಿತ್ ಶರ್ಮಾ ತಮಾಷೆ ಮಾಡುತ್ತಾ ಕಾಲ ಕಳೆಯುತ್ತಾರೆ.
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮುಂಬೈ ಹಿರಿಯ ಆಟಗಾರ ರೋಹಿತ್, ಬ್ಯಾಟಿಂಗ್ ಮಾಡುತ್ತಿದ್ದ ದಿನೇಶ್ ಕಾರ್ತಿಕ್ ರನ್ನು ಕಾಲೆಳೆದಿದ್ದು ಸ್ಟಂಪ್ ಮೈಕ್ರೋಫೋನ್ ಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಹೊಡೆಬಡಿಯ ಆಟವಾಡುತ್ತಿದ್ದ ಆರ್ ಸಿಬಿ ಫಿನಿಶರ್ ದಿನೇಶ್ ಕಾರ್ತಿಕ್ ಈಗ ರೋಹಿತ್ ಬಾಯಿಗೆ ಆಹಾರವಾಗಿದ್ದಾರೆ.
ನಿನ್ನೆಯ ಪಂದ್ಯದಲ್ಲಿ 23 ಎಸೆತ ಎದುರಿಸಿದ ದಿನೇಶ್ ಕಾರ್ತಿಕ್ 4 ಭರ್ಜರಿ ಸಿಕ್ಸರ್ ಗಳೊಂದಿಗೆ 53 ರನ್ ಗಳಿಸಿದರು. ದಿನೇಶ್ ಕಾರ್ತಿಕ್ ಗೆ ಈಗ 38 ವರ್ಷ ವಯಸ್ಸು. ಇದು ಅವರ ಕೊನೆಯ ಐಪಿಎಲ್ ಪಂದ್ಯ. ಆದರೆ ಅವರ ಆಟದ ಪರಿ ನೋಡಿದರೆ ಅವರಿಗೆ ಅಷ್ಟು ವಯಸ್ಸಾಗಿದೆ ಎಂದು ಹೇಳಲು ಸಾಧ‍್ಯವಿಲ್ಲ. ಯುವಕರೂ ನಾಚಿಸುವಂತಹ ಶಾಟ್ ಗಳನ್ನು ಹೊಡೆಯುತ್ತಿದ್ದರು.
ಇದು ಎದುರಾಳಿ ಆಟಗಾರ ರೋಹಿತ್ ಶರ್ಮಾರನ್ನೂ ಇಂಪ್ರೆಸ್ ಮಾಡಿದೆ. ದಿನೇಶ್ ಕಾರ್ತಿಕ್ ಹೊಡೆತಗಳನ್ನು ನೋಡಿ ಮೆಚ್ಚಿಕೊಂಡ ರೋಹಿತ್ ಲೈಟಾಗಿ ಕಾಲೆಳೆದಿದ್ದಾರೆ. ಡಿಕೆ ಚೆನ್ನಾಗಿ ಆಡ್ತಿದ್ದೀಯಾ. ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ತನ್ನನ್ನು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅವರ ಮನಸ್ಸಿನ ತುಂಬಾ ವಿಶ್ವಕಪ್ ಇದೆ ಎಂದು ತಮಾಷೆ ಮಾಡಿದ್ದಾರೆ. ರೋಹಿತ್ ಈ ಸಂಭಾಷಣೆ ಈಗ ವೈರಲ್ ಆಗಿದೆ.