IPL 2024: ಐಪಿಎಲ್ 2024 ರ ವೇಳಾಪಟ್ಟಿ ಇಂದು ಸಂಜೆ ಪ್ರಕಟ

Krishnaveni K

ಗುರುವಾರ, 22 ಫೆಬ್ರವರಿ 2024 (09:40 IST)
ಮುಂಬೈ: ಬಹುನಿರೀಕ್ಷಿತ ಐಪಿಎಲ್ 2024 ಕ್ರೀಡಾ ಕೂಟದ ಮೊದಲ ಹಂತದ ವೇಳಾಪಟ್ಟಿ ಇಂದು ಸಂಜೆ 5 ಗಂಟೆಗೆ ಪ್ರಕಟವಾಗಲಿದೆ.

ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಏಕಕಾಲಕ್ಕೆ ಐಪಿಎಲ್ 2024 ರ ಸಂಪೂರ್ಣ ವೇಳಾಪಟ್ಟಿ ಪ್ರಕಟವಾಗುತ್ತಿಲ್ಲ. ಬದಲಾಗಿ ಮೊದಲು ಆರಂಭಿಕ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಲಿದೆ. ಅದಾದ ಬಳಿಕ ಲೋಕಸಭೆ ಚುನಾವಣೆ ದಿನಾಂಕ ನೋಡಿಕೊಂಡು ಎರಡನೇ ಹಂತದ ವೇಳಾಪಟ್ಟಿ ಪ್ರಕಟವಾಗಲಿದೆ.

ಮೊನ್ನೆಯಷ್ಟೇ ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್, ಮಾರ್ಚ್ 22 ರಿಂದ ಐಪಿಎಲ್ ಆರಂಭವಾಗಲಿದೆ ಎಂದಿದ್ದರು. ಲೋಕಸಭೆ ಚುನಾವಣೆ ಗದ್ದಲವಿದ್ದರೂ ಭಾರತದಲ್ಲಿಯೇ ಈ ಬಾರಿ ಐಪಿಎಲ್ ನಡೆಯಲಿದೆ. ಮೊದಲ ಪಂದ್ಯದ ಚೆನ್ನೈನ ಚಿಪಾಕ್ ಮೈದಾನದಲ್ಲಿ ನಡೆಯಲಿದೆ. ಮೊದಲ ಪಂದ್ಯ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ಆಯೋಜಿಸಲಾಗುತ್ತಿದೆ. ಕಳೆದ ಐಪಿಎಲ್ ನಲ್ಲಿ ಈ ಎರಡೂ ತಂಡಗಳೂ ಫೈನಲ್ ನಲ್ಲಿ ಆಡಿ ಚೆನ್ನೈ ಗೆದ್ದು, ಗುಜರಾತ್ ರನ್ನರ್ ಅಪ್ ಆಗಿತ್ತು.

ಈಗಿನ ಲೆಕ್ಕಾಚಾರಗಳ ಪ್ರಕಾರ ಮೇ 26 ರಂದು ಐಪಿಎಲ್ ಫೈನಲ್ ನಡೆಸಲು ಉದ್ದೇಶಿಸಲಾಗಿದೆ. ಇದರ ನಡುವೆ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಕೆಲವು ದಿನಗಳ ಬ್ರೇಕ್ ಇದ್ದರೂ ಇರಬಹುದು. ಅದನ್ನು ಚುನಾವಣೆ ಘೋಷಣೆಯಾದ ಬಳಿಕವಷ್ಟೇ ತೀರ್ಮಾನಿಸಲಾಗುತ್ತದೆ. ಹಾಗಿದ್ದರೂ ಐಪಿಎಲ್ ಭಾರತದಿಂದ ಸ್ಥಳಾಂತರವಾಗಲಿದೆ ಎಂಬ ಸುದ್ದಿಗಳೆಲ್ಲಾ ಸುಳ್ಳು ಎಂದು ಬಿಸಿಸಿಐ ಈಗಾಗಲೇ ಸ್ಪಷ್ಟಪಡಿಸಿದೆ.

ಇಂದು ಸಂಜೆ 5 ಗಂಟೆಗೆ ಐಪಿಎಲ್ 2024 ವೇಳಾಪಟ್ಟಿ ಪ್ರಕಟವಾಗಲಿದ್ದು, ಇದನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ಚಾನೆಲ್ ನಲ್ಲಿ ಲೈವ್ ಆಗಿ ವೀಕ್ಷಿಸಬಹುದಾಗಿದೆ. ಅಲ್ಲದೆ ಜಿಯೋ ಸಿನಿಮಾದಲ್ಲೂ ಉಚಿತವಾಗಿ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ