ಚೆನ್ನೈ: ಐಪಿಎಲ್ 2024 ರಲ್ಲಿ ಇಂದು ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ನಡುವೆ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದವರು ಫೈನಲ್ ಗೇರಲಿದ್ದಾರೆ.
ಈ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಚೆನ್ನೈ ಪಿಚ್ ಕೂಡಾ ನಿಧಾನಗತಿಯದ್ದಾಗಿದ್ದು, ಟಾಸ್ ನಿರ್ಣಾಯಕವಾಗಲಿದೆ. ರಾಜಸ್ಥಾನ್ ರಾಯಲ್ಸ್ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವು ಸಾಧಿಸಿತ್ತು. ಲೀಗ್ ಹಂತದಲ್ಲಿ ಕೊನೆಯ ಕೆಲವು ಪಂದ್ಯಗಳಲ್ಲಿ ಮಂಕಾಗಿದ್ದ ರಾಜಸ್ಥಾನ್ ಕಳೆದ ಪಂದ್ಯದಲ್ಲಿ ಹಳಿಗೆ ಬಂದಿತ್ತು.
ಹಾಗಿದ್ದರೂ ರಾಜಸ್ಥಾನ್ ಬ್ಯಾಟಿಂಗ್ ಇನ್ನೂ ಮೊದಲಿನ ಹೊಳಪು ಕಂಡುಕೊಳ್ಳಬೇಕಾಗಿದೆ. ಸ್ವತಃ ನಾಯಕ ಸಂಜು ಸ್ಯಾಮ್ಸನ್ ತಂಡದಲ್ಲಿ ಎಲ್ಲರೂ ಅನಾರೋಗ್ಯಕ್ಕೀಡಾಗಿರುವುದು ಚಿಂತೆಯ ವಿಷಯವಾಗಿದೆ. ಆದರೆ ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದ ರಾಜಸ್ಥಾನ್ ತಂಡ ಇಂದು ಮತ್ತೊಮ್ಮೆ ಪುಟಿದೇಳುವ ವಿಶ್ವಾಸದಲ್ಲಿದೆ.
ಇತ್ತ ಸನ್ ರೈಸರ್ಸ್ ಹೈದರಾಬಾದ್ ಕೂಡಾ ಈ ಟೂರ್ನಿಯಲ್ಲಿ ಆರಂಭದಿಂದಲೂ ಬ್ಯಾಟಿಂಗ್ ನಲ್ಲಿ ಅಬ್ಬರಿಸುತ್ತಲೇ ಇದೆ. ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋತಿದ್ದ ಹೈದರಾಬಾದ್ ಗೆ ಈಗ ಫೈನಲ್ ಗೇರಲು ಎರಡನೇ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಕೈ ಚೆಲ್ಲಲು ಪ್ಯಾಟ್ ಕುಮಿನ್ಸ್ ಪಡೆ ಅಷ್ಟು ಸುಲಭವಾಗಿ ಬಿಡಲ್ಲ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹೈದರಾಬಾದ್ ಗೆ ಬ್ಯಾಟಿಂಗ್ ಕೈಕೊಟ್ಟಿತ್ತು. ಮತ್ತೊಮ್ಮೆ ಹೀಗಾಗದಂತೆ ನೋಡಿಕೊಳ್ಳಬೇಕಾಗಿದೆ. ಈ ಜಿದ್ದಾಜಿದ್ದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.