ಜೈಪುರ: ಐಪಿಎಲ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತೊಂದು ಗೆಲುವು ಸಾಧಿಸಿದೆ. ಯಶಸ್ವಿ ಜೈಸ್ವಾಲ್ ಶತಕದ ನೆರವಿನಿಂದ ಮುಂಬೈ ವಿರುದ್ಧ ನಡೆದ ಪಂದ್ಯವನ್ನು ರಾಜಸ್ಥಾನ್ 9 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈಗೆ ಅಗ್ರ ಕ್ರಮಾಂಕ ಕೈ ಕೊಟ್ಟಿತು. ಇದರಿಂದಾಗಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ರೋಹಿತ್ ಶರ್ಮಾ 6, ಇಶಾನ್ ಕಿಶನ್ ಶೂನ್ಯಕ್ಕೆ ನಿರ್ಗಮಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ತಿಲಕ್ ವರ್ಮ 45 ಎಸೆತಗಳಿಂದ 65 ರನ್ ಸಿಡಿಸಿದರು. ನೇಹಲ್ ವಧೇರಾ 49 ರನ್ ಗಳ ಕಾಣಿಕೆ ನೀಡಿದರು. ರಾಜಸ್ಥಾನ್ ಪರ ಮಾರಕ ದಾಳಿ ಸಂಘಟಿಸಿದ ಸಂದೀಪ್ ಶರ್ಮ 5 ವಿಕೆಟ್ ಕಬಳಿಸಿ ಮಿಂಚಿದರು.
ಈ ಮೊತ್ತ ಬೆನ್ನತ್ತಿದ ರಾಜಸ್ಥಾನ್ ಗೆ ಆರಂಭಿಕ ಯಶಸ್ವಿ ಜೈಸ್ವಾಲ್-ಜೋಸ್ ಬಟ್ಲರ್ ಜೋಡಿ ಅದ್ಭುತ ಆರಂಭ ನೀಡಿತು. 60 ಎಸೆತ ಎದುರಿಸಿದ ಜೈಸ್ವಾಲ್ 7 ಭರ್ಜರಿ ಸಿಕ್ಸರ್ ಗಳ ನೆರವಿನಿಂದ 104 ರನ್ ಗಳಿಸಿದರು. ಬಟ್ಲರ್ 35 ರನ್ ಗಳಿಸಿದರು. ಕೊನೆಯಲ್ಲಿ ನಾಯಕ ಸಂಜು ಸ್ಯಾಮ್ಸನ್ 28 ಎಸೆತಗಳಿಂದ 38 ರನ್ ಸಿಡಿಸಿ ತಂಡಕ್ಕೆ ಗೆಲುವು ಕೊಡಿಸಿದರು. ಅಂತಿಮವಾಗಿ ರಾಜಸ್ಥಾನ್ 18.4 ಓವರ್ ಗಳಲ್ಲಿ 183 ರನ್ ಗಳಿಗೆ ಆಲೌಟ್ ಆಯಿತು.
ಇದರೊಂದಿಗೆ ರಾಜಸ್ಥಾನ್ ಮತ್ತೆ ತನ್ನ ಅಗ್ರಪಟ್ಟ ಕಾಯ್ದುಕೊಂಡಿತು. 8 ಪಂದ್ಯಗಳಿಂದ 7 ಗೆಲುವು ಸಂಪಾದಿಸಿರುವ ರಾಜಸ್ಥಾನ್ ಒಟ್ಟು 14 ಅಂಕ ಸಂಪಾದಿಸಿದೆ. ಅತ್ತ ಮುಂಬೈ ಇಂಡಿಯನ್ಸ್ 8 ಪಂದ್ಯಗಳಿಂದ ಕೇವಲ 3 ಗೆಲುವು ಸಂಪಾದಿಸಿ ಈಗ ಪ್ಲೇ ಆಫ್ ಹಂತಕ್ಕೇರುವುದು ಅನುಮಾನವಾಗಿದೆ. ಸದ್ಯಕ್ಕೆ ಮುಂಬೈ ಅಂಕಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದೆ.