IPL 2025: ಮೊದಲ ಪಂದ್ಯಕ್ಕೆ ಹೇಗಿರಲಿದೆ ಆರ್ ಸಿಬಿ ಪ್ಲೇಯಿಂಗ್ ಇಲೆವೆನ್ ಇಲ್ಲಿದೆ ವಿವರ

Krishnaveni K

ಮಂಗಳವಾರ, 18 ಮಾರ್ಚ್ 2025 (08:56 IST)
ಕೋಲ್ಕತ್ತಾ: ಮಾರ್ಚ್ 22 ರಿಂದ ಐಪಿಎಲ್ 2025 ಕ್ಕೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಆರ್ ಸಿಬಿ ಮತ್ತು ಹಾಲಿ ಚಾಂಪಿಯನ್ ಕೆಕೆಆರ್ ಆಡಲಿದೆ. ಈ ಪಂದ್ಯದಲ್ಲಿ ಆರ್ ಸಿಬಿ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ನೋಡಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಕಪ್ ಬರವನ್ನು ಈ ಸಲವಾದರೂ ನೀಗಿಸಬಹುದು ಎಂಬ ಭರವಸೆಯೊಂದಿಗೆ ಕಣಕ್ಕಿಳಿಯುತ್ತಿದೆ. ಮೆಗಾ ಹರಾಜಿನಲ್ಲಿ ಖರೀದಿಸಿರುವ ಹೊಸ ಆಟಗಾರರಿಂದ ಭಾರೀ ನಿರೀಕ್ಷೆಯಿದೆ. ಕೆಲವು ಆಟಗಾರರು ತಂಡದಿಂದ ಹೊರ ಹೋಗಿದ್ದು ಹೊಸ ಆಟಗಾರರ ಆಗಮನವಾಗಿದೆ. ಹೀಗಾಗಿ ಆರ್ ಸಿಬಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಭಾರೀ ಬದಲಾವಣೆಯಾಗಲಿದೆ.

ಎಂದಿನಂತೆ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಅವರಿಗೆ ಫಿಲ್ ಸಾಲ್ಟ ಸಾಥ್ ನೀಡಬಹುದು. ಮೂರನೇ ಕ್ರಮಾಂಕದಲ್ಲಿ ಸ್ವತಃ ನಾಯಕ ರಜತ್ ಪಾಟೀದಾರ್ ಕಣಕ್ಕಿಳಿಯಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಅನುಭವಿ ಲಿವಿಂಗ್ ಸ್ಟೋನ್ ಬ್ಯಾಟಿಂಗ್ ಮಾಡಬಹುದು. ಐದನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್, ಟಿ20 ಸ್ಪೆಷಲಿಸ್ಟ್ ಜಿತೇಶ್ ಶರ್ಮಾ ಆಡಬಹುದು. ಆರನೇ ಕ್ರಮಾಂಕಕ್ಕೆ ಫಿನಿಶರ್ ಟಿಮ್ ಡೇವಿಡ್ ಮತ್ತು ಏಳನೇ ಕ್ರಮಾಂಕದಲ್ಲಿ ಆಲ್ ರೌಂಡರ್ ಕೃನಾಲ್ ಪಾಂಡ್ಯ ಕಣಕ್ಕಿಳಿಯಬಹುದು.

ಇದು ಬ್ಯಾಟಿಂಗ್ ಕತೆಯಾದರೆ ವೇಗದ ಬೌಲಿಂಗ್ ನಲ್ಲಿ ಸಾಕಷ್ಟು ಪೈಪೋಟಿಯಿದೆ. ಭುವನೇಶ್ವರ್ ಕುಮಾರ್ ಯಾದವ್, ಜೋಶ್ ಹೇಝಲ್ ವುಡ್, ಯಶ್ ದಯಾಳ್, ಲುಂಗಿ ಎನ್ ಗಿಡಿ ಸೇರಿದಂತೆ ಘಟಾನುಘಟಿಗಳ ಪಡೆಯೇ ಇದೆ. ಕೋಲ್ಕತ್ತಾದಲ್ಲಿ ಸ್ಪಿನ್ ಕೂಡಾ ಸಹಕರಿಸುವ ನಿರೀಕ್ಷೆಯಿರುವುದರಿಂದ ಕೃನಾಲ್ ಪಾಂಡ್ಯ ಸ್ಪಿನ್ ಬೌಲರ್ ಆಗಿಯೂ ಕರಾಮತ್ತು ಮಾಡಬಹುದು. ಅವರ ಜೊತೆಗೆ ಲಿವಿಂಗ್ ಸ್ಟೋನ್ ಕೂಡಾ ಸ್ಪಿನ್ ಬೌಲಿಂಗ್ ಮಾಡಬಲ್ಲರು. ಇವರಲ್ಲದೆ ಸ್ಪೆಷಲಿಸ್ಟ್ ಸ್ಪಿನ್ನರ್ ಬೇಕೆಂದರೆ ಸ್ವಪ್ನಿಲ್ ಸಿಂಗ್ ಗೆ ಮಣೆ ಹಾಕಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ