ಬೆಂಗಳೂರು: ಐಪಿಎಲ್ 2025 ಕ್ಕೆ ಮುನ್ನ ಇಂದು ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮ ನಡೆಯುತ್ತಿದ್ದು ಇದಕ್ಕೆ ವಿರಾಟ್ ಕೊಹ್ಲಿ ಬರುತ್ತಿದ್ದಂತೇ ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿತ್ತು.
ಪ್ರತೀ ಬಾರಿ ಐಪಿಎಲ್ ಆರಂಭಕ್ಕೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಭಿಮಾನಿಗಳಿಗಾಗಿ ಆಟಗಾರರನ್ನು ಒಳಗೊಂಡಂತೆ ಚಿನ್ನಸ್ವಾಮಿ ಮೈದಾನದಲ್ಲಿ ಮನರಂಜನಾ ಕಾರ್ಯಕ್ರಮವೊಂದನ್ನು ಏರ್ಪಡಿಸತ್ತದೆ. ಕಳೆದ ಬಾರಿ ಆರ್ ಸಿಬಿ ಮಹಿಳೆಯರು ಕಪ್ ಜೊತೆಗೆ ಪೆರೇಡ್ ನಡೆಸಿದ್ದು ವಿಶೇಷವಾಗಿತ್ತು.
ಈ ಬಾರಿ ರಜತ್ ಪಾಟೀದಾರ್ ಬಳಗ ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮದಲ್ಲಿ ಹಾಜರಿದೆ. ಎಲ್ಲಾ ಆಟಗಾರರನ್ನು ವೇದಿಕೆ ಕರೆಯಲಾಗಿದೆ. ಈ ವೇಳೆ ವಿರಾಟ್ ಕೊಹ್ಲಿ ಹೆಸರು ಹೇಳುತ್ತಿದ್ದಂತೇ ಅಭಿಮಾನಿಗಳು ಜೋರಾಗಿ ಕಿರುಚಿ ತಮ್ಮ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಬಳಿಕ ಮಾತನಾಡಿರುವ ಅವರು ಹೊಸ ನಾಯಕ ರಜತ್ ಪಾಟೀದಾರ್ ಗೆ ತಮ್ಮ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮಕ್ಕೆ ಚಿನ್ನಸ್ವಾಮಿ ಮೈದಾನ ಹೌಸ್ ಫುಲ್ ಆಗಿದೆ. ಕಲರ್ ಫುಲ್ ಲೈಟಿಂಗ್, ಮನ ಸೆಳೆಯುವ ಡ್ಯಾನ್ಸ್, ಹಾಡಿನೊಂದಿಗೆ ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರುತ್ತಿದೆ.