ಕೆಎಲ್ ರಾಹುಲ್ ಬೊಬ್ಬಿರಿಯುತ್ತಿದ್ದರೆ ನಗುತ್ತಿದ್ದ ಧೋನಿ

ಬುಧವಾರ, 4 ಜುಲೈ 2018 (08:41 IST)
ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನು 8 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದು ಟೀಂ ಇಂಡಿಯಾ ಆಂಗ್ಲರ ನಾಡಿನ ಪ್ರವಾಸವನ್ನು ಶುಭಾರಂಭ ಮಾಡಿದೆ.
 

ಪಕ್ಕಾ ಮಾಸ್ ಶೈಲಿಯಲ್ಲಿ ಬ್ಯಾಟ್ ಬೀಸಿದ ಕನ್ನಡಿಗ ಕೆಎಲ್ ರಾಹುಲ್ ಕೇವಲ 54 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್ ಗಳೊಂದಿಗೆ 101 ರನ್ ಗಳಿಸಿದರು. ಈ ಮೂಲಕ ಹಲವು ದಿನಗಳಿಂದ ತಮಗೆ ಮರೀಚಿಕೆಯಾಗಿದ್ದ ಶತಕದ ಕನಸನ್ನು ಕೈಗೂಡಿಸಿಕೊಂಡರು. ಶತಕ ಸಿಡಿಸಿದ ತಕ್ಷಣ ರಾಹುಲ್ ಅಬ್ಬರಿಸಿದ್ದು ನೋಡಿ ಥೇಟ್ ವಿರಾಟ್ ರನ್ನು ನೆನಪಿಸುವಂತಿತ್ತು. ವಿರಾಟ್ ಶೈಲಿಯಲ್ಲೇ ಸಂಭ್ರಮಿಸಿದ ರಾಹುಲ್ ತಮ್ಮ ಹತಾಶೆಯನ್ನೆಲ್ಲಾ ಹೊರ ಹಾಕುತ್ತಿದ್ದರೆ ಪೆವಿಲಿಯನ್ ನಲ್ಲಿದ್ದ ಧೋನಿ ಪಕ್ಕದಲ್ಲಿದ್ದ ಆಟಗಾರರ ಬಳಿ ಜೋರಾಗಿ ನಗುತ್ತಿದ್ದುದು ಕಂಡುಬಂತು. ಕ್ರೀಸ್ ನ ಇನ್ನೊಂದು ತುದಿಯಲ್ಲಿದ್ದ ವಿರಾಟ್ ಕೂಡಾ ಕೊನೆಗೆ ರಾಹುಲ್ ರನ್ನು ತಬ್ಬಿ ಸಮಾಧಾನಿಸಿದಂತೆ ಕಂಡುಬಂತು.

ಮೊದಲು ಬ್ಯಾಟಿಂಗ್ ಮಾಡಿದ್ದ ಆಂಗ್ಲರು 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದರು. ಟಿ20 ಕ್ರಿಕೆಟ್ ನಲ್ಲಿ ಇದು ಸಾಧಾರಣ ಮೊತ್ತವೇ. ಭಾರತದ ಪರ ಚಿನಾಮನ್ ಬೌಲರ್ ಕುಲದೀಪ್ ಯಾದವ್ 5 ವಿಕೆಟ್ ಕಿತ್ತು ಘಾತಕರಾದರು. ಉಮೇಶ್ ಯಾದವ್ 2, ಹಾರ್ದಿಕ್ ಪಾಂಡ್ಯ 1 ವಿಕೆಟ್ ಕಿತ್ತರು. ಆಂಗ್ಲರ ಪರ ಜೋಸ್ ಬಟ್ಲರ್ 69 ರನ್ ಗಳಿಸಿದ್ದು, ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಬರಲಿಲ್ಲ.

ಮೊತ್ತ ಬೆನ್ನತ್ತಲು ಭಾರತದ ಪರ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ಯಾವತ್ತೂ ಸಿಡಿಯುವ ಧವನ್ ಇಂದು ಕೇವಲ 4 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದಾಗ ಭಾರತಕ್ಕೆ ಮೊದಲ ಆಘಾತ ಕಾದಿತ್ತು.

ಆದರೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ರಾಹುಲ್ ಪಂದ್ಯದ ಗತಿಯನ್ನೇ ಬದಲಿಸಿದರು. ಆರಂಭದಲ್ಲಿ ರೋಹಿತ್ ಶರ್ಮಾ (34) ಜತೆಗೂಡಿ ಅಬ್ಬರಿಸಿದ ರಾಹುಲ್ ನಂತರ ನಾಯಕ ಕೊಹ್ಲಿ ಜತೆಗೂಡಿ ತಂಡವನ್ನು ದಡ ಮುಟ್ಟಿಸಿದರು. ಕೊಹ್ಲಿ ಕೊಂಚ ನಿಧಾನಿಯಾದರೂ 22 ಎಸೆತಗಳಲ್ಲಿ 20 ರನ್ ಗಳಿಸಿದರು.18.2 ಓವರ್ ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 163 ರನ್ ಗಳಿಸುವ ಮೂಲಕ ಮೊದಲ ಜಯ ಗಳಿಸಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ