ಅವಕಾಶ ಸಿಕ್ಕಾಗ ಮುಟ್ಟಿ ನೋಡಿಕೊಳ್ಳುವಂತೆ ಹೊಡೆದ ಕೆಎಲ್ ರಾಹುಲ್

ಶನಿವಾರ, 30 ಜೂನ್ 2018 (08:52 IST)
ಡುಬ್ಲಿನ್: ಟೀಂ ಇಂಡಿಯಾದಲ್ಲಿ ಪ್ರತಿಭೆಯಿದ್ದರೂ ಅವಕಾಶ ಸಿಗದೇ ಹತಾಶೆಗೊಳಗಾಗಿದ್ದ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ನಿನ್ನೆ ನಡೆದ ಐರ್ಲೆಂಡ್‍ ವಿರುದ್ಧದ ಪಂದ್ಯದಲ್ಲಿ ಆ ನಿರಾಶೆಗಳನ್ನೆಲ್ಲಾ ಬ್ಯಾಟ್ ಮೂಲಕ ತೋರಿಸಿದರು.

ಪರಿಣಾಮ ದ್ವಿತೀಯ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ 143 ರನ್ ಗಳಿಂದ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 213 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕರಾಗಿ ಕಣಕ್ಕಿಳಿದ ರಾಹುಲ್ ಕೇವಲ 36 ಎಸೆತಗಳಲ್ಲಿ 6 ಸಿಕ್ಸರ್ ಗಳ ಸಹಿತ 70 ರನ್ ಗಳಿಸಿದರು.  ಧವನ್ ಬದಲು ಆರಂಭಿಕರಾಗಿ ಕಣಕ್ಕಿಳಿದ ನಾಯಕ ಕೊಹ್ಲಿ ನಿನ್ನೆಯೂ ವಿಫಲರಾದರು. ಕೇವಲ 9 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.

ನಂತರ ಬಂದ ಸುರೇಶ್ ರೈನಾ 45 ಎಸೆತಗಳಲ್ಲಿ 3 ಸಿಕ್ಸರ್ ಗಳೊಂದಿಗೆ 69 ರನ್ ಗಳಿಸುವ ಮೂಲಕ ರಾಹುಲ್ ಗೆ ಉತ್ತಮ ಸಾಥ್ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ರೋಹಿತ್ ಶರ್ಮಾ ಶೂನ್ಯ ಸುತ್ತಿದರೆ ಮನೀಶ್ ಪಾಂಡೆ 21  ಕ್ಕೆ ಔಟಾದರು. ಆದರೆ ಕೊನೆಯವರಾಗಿದ್ದ ಹಾರ್ದಿಕ್ ಪಾಂಡ್ಯ ಕೇವಲ 9 ಎಸೆತಗಳಲ್ಲೇ 32 ರನ್ ಸಿಡಿಸಿದರು.  ನಿನ್ನೆ ಧೋನಿ ಆಡಲಿಲ್ಲ.

ಭಾರತ ನೀಡಿದ 213 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಐರ್ಲೆಂಡ್ ಕೇವಲ 70 ರನ್ ಗಳಿಗೆ ಆಲೌಟ್ ಆಯಿತು. ಮತ್ತೆ ಭಾರತದ ಸ್ಪಿನ್ ಜೋಡಿ ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್ ತಲಾ ಮೂರು ವಿಕೆಟ್ ಕಬಳಿಸಿ ಎದುರಾಳಿಗಳ ಕಟ್ಟಿ ಹಾಕಿದರು. ಉಮೇಶ್ ಯಾದವ್ 2 ವಿಕೆಟ್, ಚೊಚ್ಚಲ ಪಂದ್ಯವಾಡಿದ ಸಿದ್ಧಾರ್ಥ್, ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದರು. ಇದರೊಂದಿಗೆ ಟೀಂ ಇಂಡಿಯಾ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ