ರಾಹುಲ್ ದ್ರಾವಿಡ್ ದಾಖಲೆ ಮುರಿಯಲು ಕೆಎಲ್ ರಾಹುಲ್ ಗೆ ಇನ್ನು ಕೆಲವೇ ಹೆಜ್ಜೆ

ಶನಿವಾರ, 1 ಸೆಪ್ಟಂಬರ್ 2018 (17:38 IST)
ಸೌಥಾಂಪ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್, ಕರ್ನಾಟಕದವರೇ ಆದ ರಾಹುಲ್ ದ್ರಾವಿಡ್ ದಾಖಲೆಯನ್ನು ಮುರಿಯಲು ಕೆಲವೇ ಹೆಜ್ಜೆ ಬಾಕಿ ಇದ್ದಾರೆ.

ಬ್ಯಾಟ್ಸ್ ಮನ್ ಆಗಿರುವ ರಾಹುಲ್ ಬ್ಯಾಟಿಂಗ್ ನಲ್ಲಿ ಈ ಸರಣಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದಿದ್ದರೂ ಸ್ಲಿಪ್ ಫೀಲ್ಡರ್ ಆಗಿ ಭಾರೀ ಸಾಧನೆ ಮಾಡಿದ್ದಾರೆ.

ಈ ಸರಣಿಯಲ್ಲಿ ಒಟ್ಟು ಮೂರು ಪಂದ್ಯವಾಡಿರುವ ರಾಹುಲ್ ಇದುವರೆಗೆ 11 ಕ್ಯಾಚ್ ಪಡೆದಿದ್ದಾರೆ. ಇಂದು ಮೊಯಿನ್ ಅಲಿ ನೀಡಿದ ಕ್ಯಾಚ್ ಕಬಳಿಸುವ ಮೂಲಕ ರಾಹುಲ್ 11 ಕ್ಯಾಚ್ ಸಾಧನೆ ಮಾಡಿದ್ದಾರೆ. ಈ ಮೂಲಕ ಒಂದೇ ಸರಣಿಯಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದವರ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ.

ಮೊದಲ ಸ್ಥಾನದಲ್ಲಿರುವವರು ಭಾರತದವರೇ ಆದ ರಾಹುಲ್ ದ್ರಾವಿಡ್. ದ್ವಿತೀಯ ಸ್ಥಾನದಲ್ಲಿ 12 ಕ್ಯಾಚ್ ಗಳೊಂದಿಗೆ ಸೋಲ್ಕರ್ ಇದ್ದಾರೆ. ಇನ್ನು ಎರಡು ಕ್ಯಾಚ್ ಪಡೆದರೆ ಕೆಎಲ್ ರಾಹುಲ್ ವಿಶ್ವ ದಾಖಲೆ ಮಾಡುವುದು ಖಚಿತ.

ನಾಲ್ಕನೇ ಟೆಸ್ಟ್ ನ ಮೂರನೇ ದಿನವಾದ ಇಂದು ಇಂಗ್ಲೆಂಡ್ ಭೋಜನ ವಿರಾಮದ ವೇಳೆಗೆ ದ್ವಿತೀಯ ಇನಿಂಗ್ಸ್ ನಲ್ಲಿ 3 ವಿಕೆಟ್ ಕಳೆದುಕೊಂಡು 92 ರನ್ ಗಳಿಸಿದೆ. ಇದರೊಂದಿಗೆ ಇಂಗ್ಲೆಂಡ್ 65 ರನ್ ಮುನ್ನಡೆ ಪಡೆದಿದೆ. ಭಾರತದ ಪರ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ