ಬೆಂಗಳೂರು: ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುವ ಕನ್ನಡಿಗ ಕ್ರಿಕೆಟಿಗ ಕೆಎಲ್ ರಾಹುಲ್ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ.
ಆರ್ ಸಿಬಿಯಲ್ಲಿದ್ದ ಕೆಎಲ್ ರಾಹುಲ್ ಬಳಿಕ ಪಂಜಾಬ್ ತಂಡಕ್ಕೆ ಬಿಕರಿಯಾಗಿದ್ದರು. ಅದಾದ ಬಳಿಕ ಕಳೆದ ಎರಡು ವರ್ಷಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇದೀಗ ಅವರಿಗೆ ಮತ್ತೆ ಆರ್ ಸಿಬಿಗೆ ಮರಳುವ ಆಸೆಯಾಗಿದೆಯಂತೆ.
ನಿನ್ನೆ ಅವರ ಹುಟ್ಟುಹಬ್ಬದ ನಿಮಿತ್ತ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಯೂ ಟ್ಯೂಬ್ ಚಾನೆಲ್ ನಲ್ಲಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ಮತ್ತೊಮ್ಮೆ ಆರ್ ಸಿಬಿ ಪರ ಆಡುವ ಆಸೆಯಿದೆ ಎಂದು ಹೇಳಿದ್ದಾರೆ. ಇದನ್ನು ಕೇಳಿ ಆರ್ ಸಿಬಿ ಫ್ಯಾನ್ಸ್ ಬಹಳ ಖುಷಿಯಾಗಿದ್ದಾರೆ. ನಿಮ್ಮನ್ನು ಕರೆತರಲು ನಾವು ಆನ್ ಲೈನ್ ನಲ್ಲಿ ಅಭಿಯಾನ ಆರಂಭಿಸಲು ರೆಡಿ ಎಂದಿದ್ದಾರೆ. ಮೊದಲೇ ಆರ್ ಸಿಬಿಯಲ್ಲಿ ಕನ್ನಡಿಗ ಆಟಗಾರರಿಲ್ಲ ಎಂಬ ಕೊರಗಿದೆ. ಇದೀಗ ರಾಹುಲ್ ಕಮ್ ಬ್ಯಾಕ್ ಮಾಡಲು ಇಷ್ಟ ಎಂದಿದ್ದು ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಮುಂದಿನ ಹರಾಜಿನಲ್ಲಿ ಹೇಗಾದರೂ ಮಾಡಿ ಅವರನ್ನು ಕರೆ ತನ್ನಿ ಎಂದು ಆರ್ ಸಿಬಿ ಮ್ಯಾನೇಜ್ ಮೆಂಟ್ ಗೆ ಆಗ್ರಹಿಸಿದ್ದಾರೆ.
ಅಶ್ವಿನ್ ಜೊತೆ ಮಾತುಕತೆಯಲ್ಲಿ ರಾಹುಲ್ ನಾನು ಏನೇ ಆಗಿದ್ದರೂ ಮೊದಲು ಕರ್ನಾಟಕದವನು. ಕೆಎಸ್ ಸಿಎ ನನ್ನ ತವರು. ಚಿನ್ನ ಸ್ವಾಮಿಯಲ್ಲಿ ನನ್ನ ತವರು. ನಂತರ ಐಪಿಎಲ್ ಆಡಿದೆ. ಎಲ್ಲರೂ ತಮ್ಮ ತವರು ತಂಡದ ಪರ ಆಡಲು ಬಯಸುತ್ತಾರೆ. ನನಗೂ ಬೆಂಗಳೂರಿನ ಪರ ಐಪಿಎಲ್ ಆಡಲು ಮನಸ್ಸಿದೆ ಎಂದಿದ್ದಾರೆ. ರಾಹುಲ್ ಮಾತು ಕೇಳಿ ಆರ್ ಸಿಬಿಗೆ ಮುಂದಿನ ನಾಯಕ ನೀವೇ ಆಗಿ ಎಂದಿದ್ದಾರೆ.