ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವೆ ಧರ್ಮಶಾಲಾದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪಾಲಿಗೆ ಸ್ಮರಣೀಯವಾಗಲಿದೆ. ಯಾಕೆಂದರೆ ಇದು ಅವರ ವೃತ್ತಿ ಜೀವನದ 100 ನೇ ಟೆಸ್ಟ್ ಪಂದ್ಯವಾಗಲಿದೆ.
ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಇದುವರೆಗೆ 100 ಪಂದ್ಯವಾಡಿರುವುದು ಕೇವಲ 13 ಆಟಗಾರರು ಮಾತ್ರ. ಈಗ ಅಶ್ವಿನ್ 14 ನೆಯವರಾಗಿ ಈ ವಿಶೇಷ ಸಾಧನೆ ಮಾಡಲಿದ್ದಾರೆ. ಸುದೀರ್ಘ ಮಾದರಿಯಲ್ಲಿ ಇಷ್ಟು ದಿನ ಸತತವಾಗಿ ಆಡುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಅಶ್ವಿನ್ ಗೆ ಈ ಪಂದ್ಯ ವಿಶೇಷವಾಗಲಿದೆ.
ಈ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಮುನ್ನ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಶ್ವಿನ್ ಇದು ವಿಶೇಷ ಸಾಧನೆ ಎಂದು ನನಗೆ ಗೊತ್ತಿದೆ. ಆದರೆ ಇಲ್ಲಿಯವರೆಗಿನ ಪ್ರಯಾಣ ಅತ್ಯಂತ ಖುಷಿಕೊಟ್ಟಿದೆ ಎಂದಿದ್ದಾರೆ. ನನ್ನಷ್ಟೇ ಈ ಪಂದ್ಯ ನನ್ನ ತಾಯಿ, ತಂದೆ, ಹೆಂಡತಿ-ಮಕ್ಕಳಿಗೂ ಮುಖ್ಯ. ಒಬ್ಬ ಆಟಗಾರನ ಪ್ರಯಾಣದಲ್ಲಿ ಆತನ ಕುಟುಂಬವೂ ಜೊತೆಯಾಗಿರುತ್ತದೆ. ನನ್ನ ತಂದೆ ಪಂದ್ಯದಲ್ಲಿ ನಾನು ಏನು ಮಾಡಿದೆ ಎಂದು ಈಗಲೂ ದಿನಕ್ಕೆ 40 ಕರೆ ಮಾಡುತ್ತಿರುತ್ತಾರೆ ಎಂದಿದ್ದಾರೆ.
21 ವರ್ಷಗಳ ಹಿಂದೆ ಅಂಡರ್ 19 ತಂಡದಲ್ಲಿದ್ದಾಗ ಇಲ್ಲಿ ಆಡಿದ್ದೆ. ಇಲ್ಲಿ ತುಂಬಾ ಚಳಿಯಿರುತ್ತದೆ. ಬೌಲಿಂಗ್ ಮಾಡುವಾಗ ಬೆರಳು ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ಇದೇ ಸರಣಿಯಲ್ಲಿ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇದೀಗ ಮತ್ತೊಂದು ಮೈಲಿಗಲ್ಲು ನೆಡುತ್ತಿದ್ದಾರೆ.