ನ್ಯೂಯಾರ್ಕ್: ಟಿ20 ವಿಶ್ವಕಪ್ 2024 ಕ್ಕೆ ನಿನ್ನೆ ಚಾಲನೆ ಸಿಕ್ಕಿದೆ. ಆದರೆ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯುತ್ತಿರುವ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ಜನರೇ ಆಸಕ್ತಿ ತೋರಿಸುತ್ತಿಲ್ಲ.
ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆ ಅಮೆರಿಕಾ ಆತಿಥ್ಯ ವಹಿಸಿಕೊಂಡಿದೆ. ಮೊದಲ ಪಂದ್ಯ ನಿನ್ನೆ ಅಮೆರಿಕಾ ಮತ್ತು ಕೆನಡಾ ನಡುವೆ ನಡೆದಿತ್ತು. ಆದರೆ ಈ ಪಂದ್ಯಕ್ಕೆ ಮೈದಾನ ಖಾಲಿ ಹೊಡೆಯುತ್ತಿತ್ತು. ಟಿ20 ಕ್ರಿಕೆಟ್ ಎಂದರೆ ಪ್ರೇಕ್ಷಕರು ಆಸಕ್ತಿ ತೋರಿಸುತ್ತಾರೆ. ಆದರೆ ಈ ಬಾರಿ ಟಿ20 ವಿಶ್ವಕಪ್ ಗೆ ಅಷ್ಟೊಂದು ಜನರೇ ಬರುತ್ತಿಲ್ಲ.
ವಿಶೇಷವೆಂದರೆ ಭಾರತ ಮತ್ತು ಪಾಕಿಸ್ತಾನ ನಡುವೆ ಜೂನ್ 9 ರಂದು ನಡೆಯಲಿರುವ ಪಂದ್ಯದ ಟಿಕೆಟ್ ಗಳೂ ಬಿಕರಿಯಾಗಿಲ್ಲ. ಸಾಮಾನ್ಯವಾಗಿ ಸಾಂಪ್ರದಾಯಿಕ ಎದುರಾಳಿಗಳ ಪಂದ್ಯವೆಂದರೆ ನಾಲ್ಕು ತಿಂಗಳ ಮೊದಲೇ ಟಿಕೆಟ್ ಸೋಲ್ಡ್ ಔಟ್ ಆಗುತ್ತವೆ. ಆದರೆ ಇಲ್ಲಿ ಎಲ್ಲವೂ ಉಲ್ಟಾ.
ಇದು ಐಸಿಸಿಗೂ ಸಿಟ್ಟು ತರಿಸಿದೆಯಂತೆ. ಅಮೆರಿಕಾದಂತಹ ರಾಷ್ಟ್ರಗಳಲ್ಲಿ ಕ್ರಿಕೆಟ್ ಅಷ್ಟು ಜನಪ್ರಿಯವಾಗಿಲ್ಲ. ಆದರೆ ಇಲ್ಲಿ ಕ್ರಿಕೆಟ್ ಜನಪ್ರಿಯ ಮಾಡುವ ಉದ್ದೇಶದಿಂದ ಟೂರ್ನಿ ಆಯೋಜಿಸಲಾಗಿದೆ. ಆದರೆ ಇಲ್ಲಿ ಟಿಕೆಟ್ ದರಗಳು ದುಬಾರಿಯಾಗಿವೆ. ಜೊತೆಗೆ ಕ್ರಿಕೆಟ್ ಆಸಕ್ತಿಯೇ ಇಲ್ಲದ ನಾಡಿನಲ್ಲಿ ಟೂರ್ನಿ ಆಯೋಜಿಸಿದರೆ ಯಾವ ಮೈದಾನ ತಾನೇ ಭರ್ತಿಯಾಗಲು ಸಾಧ್ಯ. ಹೀಗಾಗಿ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯವನ್ನು ಮೈದಾನದಲ್ಲಿ ವೀಕ್ಷಿಸಲು ಜನರೇ ಇಲ್ಲದಂತಾಗಿದೆ.