ಅಗರ್ತಲಾ: ವಿಮಾನ ಪ್ರಯಾಣ ವೇಳೆ ನೀರು ಕುಡಿದು ಅಸ್ವಸ್ಥರಾದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ಶುಕ್ರವಾರ ರೈಲ್ವೇಸ್ ತಂಡದ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಭಾಗಿಯಾಗಲು ಸೂರತ್ ವಿಮಾನ ಪ್ರಯಾಣ ಮಾಡುವಾಗ ನೀರು ಕುಡಿದ ನಂತರ ಮಯಾಂಕ್ ಅಸ್ವಸ್ಥರಾಗಿದ್ದರು. ತೀವ್ರ ವಾಂತಿ ಮತ್ತು ಗಂಟಲಲ್ಲಿ ಉರಿ ಕಾಣಿಸಿಕೊಂಡಿತ್ತು. ಹೀಗಾಗಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ನಾಳೆ ಅವರು ಡಿಸ್ಚಾರ್ಜ್ ಆಗುವ ಸಾಧ‍್ಯತೆಯಿದೆ. ಹಾಗಿದ್ದರೂ ಅವರು ಮುಂದಿನ ರಣಜಿ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಹೀಗಾಗಿ ತಂಡದ ಜೊತೆ ಪ್ರಯಾಣಿಸದೇ ನೇರವಾಗಿ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಇದೀಗ ಘಟನೆ ಬಗ್ಗೆ ತನಿಖೆ ನಡೆಸಲು ಮಯಾಂಕ್ ತಮ್ಮ ಮ್ಯಾನೇಜರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳುವುದಾಗಿ ಪಶ್ಚಿಮ ತ್ರಿಪುರ ಎಸ್ ಪಿ ಕಿರಣ್ ಕುಮಾರ್ ತಿಳಿಸಿದ್ದಾರೆ. ಇದೀಗ ಮಯಾಂಕ್ ಕುಡಿದ ನೀರಿನ ಬಾಟಲಿಯಲ್ಲಿ ಅನಾರೋಗ್ಯಕ್ಕೆ ಕಾರಣವಾಗುವಂತಹದ್ದು ಏನಿತ್ತು ಎಂದು ತನಿಖೆ ನಡೆಯಲಿದೆ.
ರಣಜಿ ಪಂದ್ಯಕ್ಕೆ ಅಲಭ್ಯ
ಶುಕ್ರವಾರ ರೈಲ್ವೇಸ್ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಮಯಾಂಕ್ ಭಾಗಿಯಾಗಬೇಕಾಗಿತ್ತು. ಆದರೆ ಅನಾರೋಗ್ಯದಿಂದಾಗಿ ಅವರು ಭಾಗಿಯಾಗುತ್ತಿಲ್ಲ. ಕರ್ನಾಟಕದ ಇತರೆ ಆಟಗಾರರು ರಾಜ್ ಕೋಟ್ ಗೆ ಪ್ರಯಾಣ ಬೆಳೆಸಿದ್ದಾರೆ.