ಟೆಸ್ಟ್ ಬಳಿಕ ಏಕದಿನವೂ ಹೋಯ್ತು! ರಾಹುಲ್ ದ್ರಾವಿಡ್ ಮೇಲೆ ನೆಟ್ಟಿಗರು ಗರಂ
ಶನಿವಾರ, 22 ಜನವರಿ 2022 (08:40 IST)
ಪಾರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು 7 ವಿಕೆಟ್ ಗಳಿಂದ ಸೋಲುವುದರೊಂದಿಗೆ ಏಕದಿನ ಸರಣಿಯನ್ನೂ ಕಳೆದುಕೊಂಡ ಟೀಂ ಇಂಡಿಯಾ ಪ್ರದರ್ಶನ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾದಾಗ ಅವರ ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ಈಗ ಅವರ ನೇತೃತ್ವದಲ್ಲಿ ಆಡಿದ ಮೂರು ಸರಣಿಗಳ ಪೈಕಿ ಎರಡರಲ್ಲಿ ಸೋಲು ಅನುಭವಿಸಿದೆ. ಅದರಲ್ಲೂ ಟೆಸ್ಟ್ ಸರಣಿ ಬಳಿಕ ಇದೀಗ ಏಕದಿನ ಸರಣಿಯನ್ನೂ ಸೋತಿರುವುದು ನೂತನ ಕೋಚ್ ದ್ರಾವಿಡ್ ಮೇಲೆ ನೆಟ್ಟಿಗರು ಆಕ್ರೋಶಪಡುವಂತಾಗಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ನಡೆಸಿ 6 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತ್ತು. ರಾಹುಲ್ ತೀರಾ ನಿಧಾನಗತಿಯ ಆಟವಾಡಿದರು. ಶಿಖರ್ ಧವನ್, ವಿರಾಟ್ ಕೊಹ್ಲಿ ಕಳಪೆ ಮೊತ್ತಕ್ಕೆ ಔಟಾದರು. ಶ್ರೇಯಸ್ ಐಯರ್ ಎರಡೂ ಪಂದ್ಯಗಳಲ್ಲೂ ಆಡಿಲ್ಲ. ಹೀಗಾಗಿ ಭಾರತ ಗೌರವಯುತ ಮೊತ್ತ ತಲುಪಲು ತಿಣುಕಾಡಬೇಕಾಯಿತು.
ಬೌಲಿಂಗ್ ನಲ್ಲೂ ಇದೇ ರೀತಿಯಾಗಿದೆ. ಆಫ್ರಿಕಾ ಬ್ಯಾಟಿಗರ ಮೇಲೆ ಟೀಂ ಇಂಡಿಯಾ ಬೌಲರ್ ಗಳು ಕೊಂಚವೂ ಪರಿಣಾಮ ಬೀರಿಲ್ಲ. ಭುವನೇಶ್ವರ್ ಕುಮಾರ್ ಯಾದವ್ ದಯನೀಯ ವೈಫಲ್ಯ ಅನುಭವಿಸಿದ್ದಾರೆ. ಇದರಿಂದಾಗಿ ಆಫ್ರಿಕಾ 48.1 ಓವರ್ ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 288 ರನ್ ಗಳಿಸಿ ಗೆಲುವು ಕಂಡಿತು.
ಟೀಂ ಇಂಡಿಯನ್ನರ ಇತ್ತೀಚೆಗಿನ ಪ್ರದರ್ಶನ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೊಂಚವೂ ಹೋರಾಟದ ಮನೋಭಾವವೇ ಕಾಣುತ್ತಿಲ್ಲ. ರಾಹುಲ್ ದ್ರಾವಿಡ್ ರನ್ನು ಅತಿಯಾಗಿ ವೈಭವೀಕರಿಸಲಾಯಿತು.ಟೀಂ ಇಂಡಿಯನ್ನರಲ್ಲಿ ಹಲವು ಸಮಸ್ಯೆಗಳಿವೆ. ಆದರೂ ಕೋಚ್ ಅದನ್ನು ಸರಿಪಡಿಸುತ್ತಿಲ್ಲವೇಕೆ ಎಂದು ದ್ರಾವಿಡ್ ಮೇಲೆ ಗರಂ ಆಗಿದ್ದಾರೆ.