ಬೆಂಗಳೂರು: ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿಯಲ್ಲಿ ಟೀಂ ಇಂಡಿಯಾದ ಫೀಲ್ಡರ್ ಆಫ್ ದಿ ಸೀರೀಸ್ ಅವಾರ್ಡ್ ನ್ನು ಈ ಬಾರಿ ವಿರಾಟ್ ಕೊಹ್ಲಿ ಪಡೆದುಕೊಂಡಿದ್ದಾರೆ.
ಟಿ. ದಿಲೀಪ್ ಟೀಂ ಇಂಡಿಯಾ ಕೋಚ್ ಆದ ಮೇಲೆ ತಂಡದಲ್ಲಿ ಅತ್ಯುತ್ತಮ ಫೀಲ್ಡರ್ ನ್ನು ಗುರುತಿಸಿ ಮೆಡಲ್ ನೀಡಲಾಗುತ್ತಿದೆ. ಅದರಂತೆ ಈ ಸರಣಿಯಲ್ಲಿ ಯುವ ಕ್ರಿಕೆಟಿಗರ ನಡುವೆ ಕೊಹ್ಲಿ ಬೆಸ್ಟ್ ಫೀಲ್ಡರ್ ಅವಾರ್ಡ್ ಪಡೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ನಡೆದಿದ್ದ ಕೊನೆಯ ಪಂದ್ಯದಲ್ಲಿ ಯುವ ಕ್ರಿಕೆಟಿಗರೂ ನಾಚುವಂತೆ ಬೌಂಡರಿ ಲೈನ್ ಬಳಿ ಚಿಗರೆಯಂತೆ ಹಾರಿ ಬಾಲ್ ತಡೆದಿದ್ದು ಎಲ್ಲೆಡೆ ವೈರಲ್ ಆಗಿತ್ತು. ಈ ಸರಣಿಯಲ್ಲಿ ಬ್ಯಾಟ್ ನಿಂದ ಕೊಹ್ಲಿ ಹೆಚ್ಚು ಕೊಡುಗೆ ನೀಡಿಲ್ಲವಾದರೂ ಫೀಲ್ಡಿಂಗ್ ನಿಂದ ಗಮನ ಸೆಳೆದಿದ್ದರು.
ಇದೀಗ ಕೊಹ್ಲಿಗೆ ಬೆಸ್ಟ್ ಫೀಲ್ಡರ್ ಅವಾರ್ಡ್ ಘೋಷಣೆ ಮಾಡುವಾಗ ಕೋಚ್ ದಿಲೀಪ್ ಇನ್ನೊಂದು ವಿಶಿಷ್ಟ ವಿಚಾರವನ್ನು ಹೊರಹಾಕಿದ್ದಾರೆ. ಕೊಹ್ಲಿ ಸದಾ ತಮ್ಮನ್ನು ತಾವು ಪರೀಕ್ಷೆಗೊಳಪಡಿಸಲು ಬಯಸುತ್ತಾರೆ. ವಿಶ್ವಕಪ್ ಸಂದರ್ಭದಲ್ಲಿ ಎರಡು ಬಾರಿ ಅವರು ಬೆಸ್ಟ್ ಫೀಲ್ಡರ್ ಪದಕ ಗೆದ್ದಿದ್ದರು. ನನಗೆ ಇನ್ನೂ ನೆನಪಿದೆ, ವೆಸ್ಟ್ ಇಂಡೀಸ್ ಸರಣಿಯಲ್ಲಿ ಕೊಹ್ಲಿ ನನ್ನ ಬಳಿ ನಾನು ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡಲ್ಲ. ನನ್ನನ್ನು ನಾನು ಪರೀಕ್ಷೆಗೊಳಪಡಿಸಲು ಶಾರ್ಟ್ ಲೆಗ್ ಅಥವಾ ಸಿಲ್ಲಿ ಪಾಯಿಂಟ್ ನಂತಹ ಕಷ್ಟದ ಜಾಗದಲ್ಲಿ ಫೀಲ್ಡಿಂಗ್ ಮಾಡಲು ಅವಕಾಶ ಕೊಡಿ ಎಂದು ಕೇಳಿದ್ದರು. ಅವರ ಬದ್ಧತೆ ಯುವ ಕ್ರಿಕೆಟಿಗರಿಗೆ ಸ್ಪೂರ್ತಿಯಾಗಬೇಕು. ನೀವು ಅವರ ಜೊತೆ ಆಡುತ್ತಿರುವುದೇ ನಿಮ್ಮ ಅದೃಷ್ಟ ಎಂದು ಯುವ ಕ್ರಿಕೆಟಿಗರಿಗೆ ದಿಲೀಪ್ ವಿವರಿಸಿದ್ದಾರೆ.