ಏಕಕಾಲಕ್ಕೆ ಕ್ರೀಸ್ ಗೆ ಬಂದು ತಮಾಷೆಗೀಡಾದ ರಿಷಬ್ ಪಂತ್, ಶ್ರೇಯಸ್ ಅಯ್ಯರ್! ಇವರಿಗೆ ಕೊಹ್ಲಿ ಹೇಳಿದ್ದೇನು?

ಸೋಮವಾರ, 23 ಸೆಪ್ಟಂಬರ್ 2019 (09:45 IST)
ಬೆಂಗಳೂರು: ಒಬ್ಬ ಬ್ಯಾಟ್ಸ್ ಮನ್ ಔಟಾದರೆ ಮುಂದಿನ ಕ್ರಮಾಂಕದ ಒಬ್ಬ ಬ್ಯಾಟ್ಸ್ ಮನ್ ಕ್ರೀಸ್ ಗೆ ಬರುವುದು ಸಾಮಾನ್ಯ. ಆದರೆ ಭಾರತ ಮತ್ತು ದ.ಆಫ್ರಿಕಾ ನಡುವಿನ ಟಿ20 ಪಂದ್ಯದ ವೇಳೆ ಇಬ್ಬರು ಬ್ಯಾಟ್ಸ್ ಮನ್ ಗಳು ಮೈದಾನಕ್ಕೆ ಬಂದು ತಮಾಷೆಗೀಡಾದ ಘಟನೆ ನಡೆದಿದೆ.


ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ಆರಂಭಿಕ ಶಿಖರ್ ಧವನ್ ಔಟಾದ ಬಳಿಕ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿ ರಿಷಬ್ ಪಂತ್ ಅಥವಾ ಶ್ರೇಯಸ್ ಅಯ್ಯರ್ ಇಬ್ಬರಲ್ಲಿ ಒಬ್ಬರು ಮೈದಾನಕ್ಕೆ ಬರಬೇಕಿತ್ತು. ಆದರೆ ಇವರಿಬ್ಬರೂ ಏಕಕಾಲಕ್ಕೆ ಬ್ಯಾಟ್ ಹಿಡಿದುಕೊಂಡು ಬರಲು ಹೊರಟಿದ್ದು, ಹಾಸ್ಯಕ್ಕೀಡಾದರು. ಬಳಿಕ ರಿಷಬ್ ಪಂತ್‍ ಅವರೇ ಕ್ರೀಸ್ ಗಿಳಿದರು.

ಈ ಬಗ್ಗೆ ಪಂದ್ಯದ ನಂತರ ಮಾತನಾಡಿದ ನಾಯಕ ಕೊಹ್ಲಿ ಇದು ಸಂವಹನ ಕೊರತೆಯಿಂದ ಹೀಗಾಯಿತು ಎಂದಿದ್ದಾರೆ. ಒಂದು ವೇಳೆ ಇಬ್ಬರೂ ಮೈದಾನಕ್ಕೆ ಬಂದಿದ್ದರೆ ತಮಾಷೆಯಾಗುತ್ತಿತ್ತು. ಇದಕ್ಕೆ ಕಾರಣವಾಗಿದ್ದು, ಬ್ಯಾಟಿಂಗ್ ಕೋಚ್ ಇವರಿಬ್ಬರಲ್ಲಿ ಒಂದು ವೇಳೆ 10 ಓವರ್ ಗಳ ಮೊದಲು ಕ್ರೀಸ್ ಗಿಳಿಯಬೇಕಾದರೆ ಮೊದಲು ಶ್ರೇಯಸ್ ಅಯ್ಯರ್ ಆಡಲಿ ಒಂದು ವೇಳೆ ಮೂರನೇ ಬ್ಯಾಟ್ಸ್ ಮನ್ 10 ಓವರ್ ನಂತರ ಔಟಾದರೆ ರಿಷಬ್ ಪಂತ್ ಮೊದಲು ಬ್ಯಾಟಿಂಗ್ ಮಾಡಲಿ ಎಂದಿದ್ದರಂತೆ. ಆದರೆ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಇಬ್ಬರೂ ಏಕಕಾಲಕ್ಕೆ ಬ್ಯಾಟ್, ಪ್ಯಾಡ್ ಕಟ್ಟಿಕೊಂಡು ಮೈದಾನಕ್ಕೆ ಬರಲು ಹೊರಟಿದ್ದೇ ಈ ತಮಾಷೆಗೆ ಕಾರಣವಾಯಿತು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ