ವಿಶ್ವಕಪ್ ಸಮರಕ್ಕೆ ಮೊದಲು ಅಭಿನಂದನ್ ಜೈನ್ ಲೇವಡಿ ಮಾಡಿದ ಪಾಕ್ ಟಿವಿ ವಾಹಿನಿ
ಬುಧವಾರ, 12 ಜೂನ್ 2019 (09:09 IST)
ಇಸ್ಲಾಮಾಬಾದ್: ವಿಶ್ವಕಪ್ ಕೂಟದಲ್ಲಿ ಜೂನ್ 16 ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ.
ಈ ಜಿದ್ದಾ ಜಿದ್ದಿನ ಹೋರಾಟಕ್ಕೆ ಮೊದಲು ಪಾಕಿಸ್ತಾನದ ಟಿವಿ ವಾಹಿನಿಯೊಂದು ವಿಂಗ್ ಕಮಾಂಡರ್ ಅಭಿನಂದನ್ ಜೈನ್ ರನ್ನು ಲೇವಡಿ ಮಾಡುವಂತಹ ಜಾಹೀರಾತೊಂದನ್ನು ಪ್ರಕಟಿಸಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಏರ್ ಸ್ಟ್ರೈಕ್ ನಡೆಸಿದ ಬಳಿಕ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಜೈನ್ ಅಕಸ್ಮತ್ತಾಗಿ ಪಾಕ್ ಗಡಿಯೊಳಕ್ಕೆ ಹೋಗಿ ಕೊನೆಗೆ ಭಾರತ ಸರ್ಕಾರ ಮಧ್ಯಸ್ಥಿಕೆ ವಹಿಸಿ ಆತನನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದಿತ್ತು.
ಆದರೆ ಪಾಕಿಸ್ತಾನ ಈ ವಿಚಾರವನ್ನು ಭಾರತದ ವಿರುದ್ಧ ಲೇವಡಿ ಮಾಡಲು ಅಸ್ತ್ರವಾಗಿ ಬಳಸಿಕೊಂಡಿದೆ. ಅಭಿನಂದನ್ ಜೈನ್ ರನ್ನೇ ಹೋಲುವ ವ್ಯಕ್ತಿ ಚಹಾ ಹೀರುತ್ತಾ ಕುಳಿತಿರುತ್ತಾನೆ. ಆತನಿಗೆ ಕ್ರಿಕೆಟ್ ಕುರಿತಾಗಿ ಹಲವು ಪ್ರಶ್ನೆ ಕೇಳಲಾಗುತ್ತದೆ. ಈ ಸಂದರ್ಭದಲ್ಲಿ ಆತ ಸಾರಿ, ನಿಮಗೆ ನಾನು ಇದನ್ನು ಹೇಳುವ ಹಾಗಿಲ್ಲ ಎನ್ನುತ್ತಾನೆ. ಕೊನೆಯಲ್ಲಿ ಆತ ಕಪ್ ಸಮೇತ ಎದ್ದು ಹೋಗುವಾಗ ಕಪ್ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀಯಾ ಎಂದು ಕೇಳಿ ತಮಾಷೆ ಮಾಡಲಾಗುತ್ತದೆ. ಪಾಕ್ ಟಿವಿಯ ಈ ಜಾಹೀರಾತಿಗೆ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.