ನೀವು ಹೇಳಿದ್ದನ್ನೆಲ್ಲಾ ಕೇಳಲಾಗದು, ಪ್ರೂಫ್ ಕೊಡಿ ಎಂದು ಬಿಸಿಸಿಐಗೆ ತಾಕೀತು ಮಾಡಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ

Krishnaveni K

ಮಂಗಳವಾರ, 16 ಜುಲೈ 2024 (11:51 IST)
ಇಸ್ಲಾಮಾಬಾದ್: ತನ್ನ ನೆಲದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಭಾಗಿಯಾಗಲು ಹಿಂದೇಟು ಹಾಕುತ್ತಿರುವ ಭಾರತ ತಂಡಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಇಲ್ಲ ಎಂದು ಲಿಖಿತವಾಗಿ ಸಾಕ್ಷ್ಯ ಕೊಡಿ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಾಕೀತು ಮಾಡಿದೆ.

ಮುಂದಿನ ವರ್ಷ ಆರಂಭದಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಆದರೆ ಪಾಕಿಸ್ತಾನಕ್ಕೆ ಟೀಂ ಇಂಡಿಯಾವನ್ನು ಕಳುಹಿಸಲು ಬಿಸಿಸಿಐ ಹಿಂದೇಟು ಹಾಕುತ್ತಿದೆ. ಐಸಿಸಿ ಮೇಲೆ ಒತ್ತಡ ಹಾಕುತ್ತಿರುವ ಬಿಸಿಸಿಐ ನಮ್ಮ ತಂಡವನ್ನು ಪಾಕ್ ಗೆ ಕಳುಹಿಸಿಕೊಡಲು ಭಾರತ ಸರ್ಕಾರದ ಒಪ್ಪಿಗೆ ಇಲ್ಲ, ನಮಗೆ ತಟಸ್ಥ ಸ್ಥಳದಲ್ಲಿ ಪಂದ್ಯ ಆಯೋಜಿಸಿ ಎಂದು ಬೇಡಿಕೆಯಿಟ್ಟಿದೆ.

ಆದರೆ ಪಾಕಿಸ್ತಾನ ಇದನ್ನು ಒಪ್ಪುತ್ತಿಲ್ಲ. ಕೇಂದ್ರ ಸರ್ಕಾರದ ಒಪ್ಪಿಗೆ ಇಲ್ಲ ಎಂದು ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು. ಈ ಬಗ್ಗೆ ಲಿಖಿತ ಸಾಕ್ಷ್ಯ ಕೊಡಿ ಎಂದು ಕೇಳಿದೆ. ಒಂದು ವೇಳೆ ನಿಮ್ಮ ತಂಡವನ್ನು ನಮ್ಮ ದೇಶಕ್ಕೆ ಕಳುಹಿಸದೇ ಇದ್ದರೆ ನಾವೂ ಮುಂದಿನ ದಿನಗಳಲ್ಲಿ ನಮ್ಮ ತಂಡವನ್ನು ನಿಮ್ಮ ದೇಶಕ್ಕೆ ಕಳುಹಿಸಲ್ಲ ಎಂದಿದೆ.

ಸದ್ಯದ ಪರಿಸ್ಥಿತಿಯಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವುದು ಅನುಮಾನವಾಗಿದೆ. ಈ ಹಿನ್ನಲೆಯಲ್ಲಿ ಬೇರೊಂದು ಸ್ಥಳದಲ್ಲಿ ಪಂದ್ಯಗಳನ್ನು ಆಯೋಜಿಸಬೇಕೆಂದರೆ ಐಸಿಸಿ ಅದಕ್ಕೆ ಹೆಚ್ಚುವರಿ ಬಜೆಟ್ ಮೀಸಲಿಡಬೇಕಾಗುತ್ತದೆ. ಇದಕ್ಕೆ ಐಸಿಸಿ ತಯಾರಾಗುತ್ತದೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ