ಮೊದಲ ಎಸೆತದಲ್ಲೇ 12 ರನ್ ಮಾಡಿ ವಿಶ್ವ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

Krishnaveni K

ಭಾನುವಾರ, 14 ಜುಲೈ 2024 (20:47 IST)
ಹರಾರೆ: ಭಾರತ ಮತ್ತು ಜಿಂಬಾಬ್ವೆ ನಡುವಿನ ಐದನೆಯ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಯಶಸ್ವಿ ಜೈಸ್ವಾಲ್ ವಿಶಿಷ್ಟ ದಾಖಲೆಯೊಂದನ್ನು ಮಾಡಿದ್ದಾರೆ.

ಯಶಸ್ವಿ ಜೈಸ್ವಾಲ್ ಈ ಪಂದ್ಯದಲ್ಲಿಗಳಿಸಿದ್ದು ಕೇವಲ 12 ರನ್. ಅದೂ ಮೊದಲ ಎಸೆತದಲ್ಲೇ ಇಷ್ಟು ರನ್ ಮಾಡಿದ್ದರು. ಈ ಮೂಲಕ ಮೊದಲ ಎಸೆತದಲ್ಲೇ 12 ರನ್ ಗಳಿಸಿ ವಿಶ್ವ ದಾಖಲೆ ಬರೆದಿದ್ದಾರೆ. ಇದು ಕ್ರಿಕೆಟ್ ನಲ್ಲಿ ಅಪರೂಪದ ದಾಖಲೆಯಾಗಿದೆ. ಆದರೆ ಅವರ ಅಬ್ಬರ ಹೆಚ್ಚು ಮುಂದುವರಿಯಲಿಲ್ಲ.

ಜಿಂಬಾಬ್ವೆ ನಾಯಕ ಸಿಕಂದರ್ ಮೊದಲ ಓವರ್ ಎಸೆದಿದ್ದರು. ಈ ವೇಳೆ ಮೊದಲ ಎಸೆತವನ್ನೇ ಅವರು ನೋಬಾಲ್ ಮಾಡಿದರು. ಆದರೆ ಆ ಎಸೆತವನ್ನು ಜೈಸ್ವಾಲ್ ಸಿಕ್ಸರ್ ಗಟ್ಟಿದ್ದರು. ಹೀಗಾಗಿ ಅದು ಲೀಗಲ್ ಡೆಲಿವರಿ ಆಗಿರಲಿಲ್ಲ. ಇದರಿಂದಾಗಿ ಸಿಕಂದರ್ ಮತ್ತೊಂದು ಎಸೆತ ಎಸೆದರು. ಅಧಿಕೃತವಾಗಿ ಇದು ಮೊದಲನೆಯ ಬಾಲ್ ಎನಿಸಿಕೊಂಡಿತು.

ಈ ಬಾಲ್ ನಲ್ಲೂ ಜೈಸ್ವಾಲ್ ಸಿಕ್ಸರ್ ಸಿಡಿಸಿದರು. ಈ ಮೂಲಕ ಮೊದಲ ಎಸೆತದಲ್ಲೇ 12 ರನ್ ಗಳಿಸಿದ ವಿಶ್ವ ದಾಖಲೆ ಅವರದ್ದಾಯಿತು. ಆದರೆ ದುರದೃಷ್ಟವೆಂದರೆ ಇನಿಂಗ್ಸ್ ನ ನಾಲ್ಕನೇ ಬಾಲ್ ನಲ್ಲೇ ಬೌಲ್ಡ್ ಆಗಿ ಜೈಸ್ವಾಲ್ ನಿರ್ಗಮಿಸಬೇಕಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ