ಅಗರ್ತಲಾ: ಕರ್ನಾಟಕ ಕ್ರಿಕೆಟ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ವಿಮಾನ ಪ್ರಯಾಣ ವೇಳೆ ಅಸ್ವಸ್ಥಗೊಂಡ ಪ್ರಕರಣದ ಬಗ್ಗೆ ಹಲವು ಅನುಮಾನಗಳು ಅಭಿಮಾನಿಗಳನ್ನು ಕಾಡುತ್ತಿದೆ.
ರಣಜಿ ಟ್ರೋಫಿ ಪಂದ್ಯವಾಡಲು ತಂಡದ ಜೊತೆ ಸೂರತ್ ಗೆ ಪ್ರಯಾಣ ಬೆಳೆಸುವಾಗ ಮಯಾಂಕ್ ವಿಮಾನದಲ್ಲಿ ಬಾಟಲಿ ನೀರು ಸೇವಿಸಿದ್ದರು. ಇದನ್ನು ಸೇವಿಸಿದ ಬಳಿಕ ಮಯಾಂಕ್ ಗೆ ವಾಂತಿಯಾಗಿದ್ದು ಗಂಟಲಿನಲ್ಲಿ ಉರಿ ಅನುಭವವಾಗಿದೆ. ಹೀಗಾಗಿ ತಕ್ಷಣವೇ ಅವರನ್ನು ಅಗರ್ತಲಾದ ಆಸ್ಪತ್ರೆಗೆ ದಾಖಲಿಸಿ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಯಿತು.
ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕಿದ್ದರಿಂದ ಮಯಾಂಕ್ ಚೇತರಿಸಿಕೊಂಡರು. ಇದೀಗ ಸ್ವತಃ ಮಯಾಂಕ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಸಮೇತ ನಾನು ಸುಧಾರಿಸಿಕೊಂಡಿದ್ದು ನಿಮ್ಮೆಲ್ಲರ ಪ್ರಾರ್ಥನೆಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಮಯಾಂಕ್ ಪ್ರಕರಣದಲ್ಲಿ ಕಾಡುತ್ತಿರುವ ಅನುಮಾನಗಳು
ಘಟನೆ ಬಗ್ಗೆ ಮಯಾಂಕ್ ತಮ್ಮ ಮ್ಯಾನೇಜರ್ ಮೂಲಕ ತ್ರಿಪುರಾ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಘಟನೆ ಬಗ್ಗೆ ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಸಾಮಾನ್ಯವಾಗಿ ವಿಮಾನ ಪ್ರಯಾಣಕ್ಕೆ ಮೊದಲು ಸಿಬ್ಬಂದಿ ಎಲ್ಲಾ ರೀತಿಯ ಸುರಕ್ಷತೆ ಕೈಗೊಳ್ಳಲಾಗಿದೆಯೇ? ಏನಾದರೂ ವಿಧ್ವಂಸಕ ವಸ್ತುಗಳಿವೆಯೇ ಎಂದು ಪರಿಶೀಲಿಸುತ್ತಾರೆ. ಎಲ್ಲಾ ರೀತಿಯ ಪರಿಶೀಲನೆಯ ನಂತರವಷ್ಟೇ ಹಾರಾಟಕ್ಕೆ ಅನುಮತಿ ನೀಡಲಾಗುತ್ತದೆ. ಹಾಗಿದ್ದರೆ ಪರಿಶೀಲನೆ ವೇಳೆಯೂ ಕಲುಷಿತ ನೀರು ಇರುವುದು ಯಾಕೆ ಪತ್ತೆಯಾಗಲಿಲ್ಲ ಎನ್ನುವುದು ಮೊದಲ ಅನುಮಾನ.
ಬಹುಶಃ ಈ ಬಾಟಲಿಯನ್ನು ಯಾರೋ ಪ್ರಯಾಣಿಕರೇ ತಂದಿಟ್ಟಿರಬಹುದು. ಆದರೆ ಪ್ರಯಾಣಿಕರು ಬಳಸಿದ ಬಾಟಲಿಯನ್ನು ಮಯಾಂಕ್ ಯಾಕೆ ಬಳಸಿದರು. ಅವರದ್ದೇ ಬಾಟಲಿಯಿಂದ ನೀರು ಯಾಕೆ ಸೇವಿಸಲಿಲ್ಲ ಎನ್ನುವುದು ಇನ್ನೊಂದು ಅನುಮಾನ ಕಾಡುತ್ತಿದೆ. ಇಂತಹ ಅನುಮಾನಗಳಿಗೆ ಪೊಲೀಸ್ ತನಿಖೆಯಿಂದ ಉತ್ತರ ಸಿಗಬೇಕಿದೆ.