ಟೀಂ ಇಂಡಿಯಾ ಮುಖ್ಯ ಕೋಚ್ ಘೋಷಣೆಯಾದ ಬೆನ್ನಲ್ಲೇ ರಾಹುಲ್ ದ್ರಾವಿಡ್ ಶಾಕಿಂಗ್ ಹೇಳಿಕೆ
ಶುಕ್ರವಾರ, 1 ಡಿಸೆಂಬರ್ 2023 (08:20 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಮತ್ತು ಅವರ ಸಿಬ್ಬಂದಿಗಳು ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಘೋಷಿಸಿದ ಬೆನ್ನಲ್ಲೇ ದ್ರಾವಿಡ್ ಹೇಳಿಕೆ ಅಚ್ಚರಿ ಮೂಡಿಸಿದೆ.
ಬಿಸಿಸಿಐ ನಿನ್ನೆಯಷ್ಟೇ ಮಾಧ‍್ಯಮ ಪ್ರಕಟಣೆ ಮೂಲಕ ವಿಶ್ವಕಪ್ ನಲ್ಲಿ ಅಭೂತಪೂರ್ವ ನಿರ್ವಹಣೆ ತೋರಿದ ರಾಹುಲ್ ದ್ರಾವಿಡ್ ಮತ್ತು ಅವರ ಸಹಾಯಕ ಸಿಬ್ಬಂದಿಗಳು ಈಗಿನ ಹುದ್ದೆಯಲ್ಲೇ ಮುಂದುವರಿಯಲಿದ್ದಾರೆ ಎಂದು ಘೋಷಿಸಿತ್ತು.
ಆದರೆ ಮಾಧ್ಯಮಗಳು ಈಗ ವಿಸ್ತೃತಗೊಂಡಿರುವ ಕೋಚ್ ಹುದ್ದೆಯ ಅವಧಿ ಬಗ್ಗೆ ಕೇಳಿದಾಗ ದ್ರಾವಿಡ್ ನನಗೆ ಇನ್ನೂ ಬಿಸಿಸಿಐ ಅಧಿಕೃತ ಪ್ರಕಟಣೆ ನೀಡಿದೆ. ಆದರೆ ಅಧಿಕೃತ ಒಪ್ಪಂದ ಪತ್ರ ಇನ್ನೂ ನನ್ನ ಕೈಸೇರಿಲ್ಲ. ಸದ್ಯಕ್ಕೆ ನಾನು ಯಾವುದಕ್ಕೂ ಸಹಿ ಹಾಕಿಲ್ಲ. ಬಿಸಿಸಿಐ ಒಪ್ಪಂದ ಪತ್ರ ಬಂದ ಮೇಲಷ್ಟೇ ನನ್ನ ಅವಧಿ ಮತ್ತಿತರ ವಿವರಗಳು ಗೊತ್ತಾಗಲಿದೆ ಎಂದಿದ್ದಾರೆ.
ನಿನ್ನೆ ಬಿಸಿಸಿಐ ದ್ರಾವಿಡ್ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂದಿತ್ತು. ಆದರೆ ಅವರ ಅವಧಿ ಎಷ್ಟು ಸಮಯ ಎಂದು ಪ್ರಕಟಣೆ ನೀಡಿರಲಿಲ್ಲ. ಹೀಗಾಗಿ ಈ ಬಗ್ಗೆ ಗೊಂದಲ ಮುಂದುವರಿದಿದೆ. ಈ ವಿಚಾರ ತಮಗೂ ಗೊತ್ತಿಲ್ಲ ಎಂದಿದ್ದಾರೆ ದ್ರಾವಿಡ್.