ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಮಾಜಿ ಕೋಚ್ ರವಿಶಾಸ್ತ್ರಿ ಅಚ್ಚರಿಯ ವಿಚಾರವನ್ನು ಹೊರಹಾಕಿದ್ದಾರೆ.
ಮೊನ್ನೆಯಷ್ಟೇ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದರು. ರೋಹಿತ್ ಶರ್ಮಾ ಟೆಸ್ಟ್ ಮಾದರಿಗೆ ವಿದಾಯ ಘೋಷಿಸಿದ ಎರಡೇ ದಿನಕ್ಕೆ ಕೊಹ್ಲಿ ಕೂಡಾ ನಿವೃತ್ತಿ ಘೋಷಿಸಿದ್ದರು.
ಕೊಹ್ಲಿ ನಿವೃತ್ತಿ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿರುವ ರವಿಶಾಸ್ತ್ರಿ, ಕೊಹ್ಲಿ ನಿವೃತ್ತಿ ಘೋಷಿಸುವ ಒಂದು ವಾರದ ಹಿಂದಷ್ಟೇ ನಡೆಸಿದ ಮಾತುಕತೆ ಬಗ್ಗೆ ಬಹಿರಂಗಪಡಿಸಿದ್ದಾರೆ.
ನಿವೃತ್ತಿ ಹೇಳುವ ಒಂದು ವಾರದ ಮುಂಚೆ ವಿರಾಟ್ ಜೊತೆ ಮಾತನಾಡಿದ್ದೆ. ಆಗ ಅವರು ಮಾನಸಿಕವಾಗಿ ತುಂಬಾ ಬಳಲಿದಂತೆ ಕಂಡುಬಂದರು. ಅವರ ನಿರ್ಧಾರ ಸ್ಪಷ್ಟವಾಗಿದ್ದಂತೆ ಕಂಡುಬಂದಿತ್ತು. ಶಾರೀರಿಕವಾಗಿ ಅವರು ಜಗತ್ತಿನ ಫಿಟ್ ಆಟಗಾರರಿರಬಹುದು. ಆದರೆ ಮಾನಸಿಕವಾಗಿ ಅವರು ಬಳಲಿದ್ದರು. ಈ ಫಾರ್ಮ್ಯಾಟ್ ಗೆ ಸಾಕಷ್ಟು ಕೊಡುಗೆ ನೀಡಿರುವುದು ಅವರ ಮಾತುಗಳಲ್ಲಿ ಸ್ಪಷ್ಟವಾಗಿತ್ತು. ಇನ್ನು ಒಂದೆರಡು ವಿಚಾರಗಳ ಬಗ್ಗೆಯೂ ಅವರು ನನ್ನಲ್ಲಿ ಹಂಚಿಕೊಂಡರು. ಆದರೆ ಅದು ವೈಯಕ್ತಿಕವಾಗಿದ್ದು ಇಲ್ಲಿ ಹಂಚಿಕೊಳ್ಳಲಾಗದು. ಹಾಗಿದ್ದರೂ ಅವರು ನಿವೃತ್ತಿ ಪ್ರಕಟಿಸಿದಾಗ ನನಗೆ ಅಚ್ಚರಿಯಾಯಿತು. ಕೊಹ್ಲಿ ಇನ್ನೂ ಎರಡು ವರ್ಷ ಟೆಸ್ಟ್ ಕ್ರಿಕೆಟ್ ಆಡಬಹುದು ಎಂದುಕೊಂಡಿದ್ದೆ ಎಂದಿದ್ದಾರೆ ರವಿಶಾಸ್ತ್ರಿ.