ಇಂಗ್ಲೆಂಡ್ ಗೆ ಶಾಕ್ ಕೊಟ್ಟ ಟೀಂ ಇಂಡಿಯಾವನ್ನು ಕೋಚ್ ರವಿಶಾಸ್ತ್ರಿ ಪೆವಿಲಿಯನ್ ನಲ್ಲಿ ಸ್ವಾಗತಿಸಿದ್ದು ಹೇಗೆ ಗೊತ್ತಾ?!

ಸೋಮವಾರ, 20 ಆಗಸ್ಟ್ 2018 (09:03 IST)
ಟ್ರೆಂಟ್ ಬ್ರಿಡ್ಜ್: ಎರಡು ಹೀನಾಯ ಪ್ರದರ್ಶನದ ನಂತರ ಎದುರಾಳಿಗೇ ಶಾಕ್ ಕೊಡುವಂತಹ ಅದ್ಭುತ ಪ್ರದರ್ಶನವನ್ನು ತನ್ನ ಹುಡುಗರು ಕೊಟ್ಟಿದ್ದಕ್ಕೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಸಹಜವಾಗಿಯೇ ಖುಷಿಯಾಗಿದ್ದರು.

ಇಷ್ಟು ದಿನ ತಮ್ಮ ಹಾಗೂ ತಂಡದ ಮೇಲೆ ಬರುತ್ತಿದ್ದ ಟೀಕೆಗಳಿಗೆ ಉತ್ತರಿಸಿದ ನೆಮ್ಮದಿ ತೃತೀಯ ಟೆಸ್ಟ್ ನ ಎರಡನೇ ದಿನದಾಟದ ಅಂತ್ಯಕ್ಕೆ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಇಂಗ್ಲೆಂಡ್ ನ್ನು ಮೊದಲ ಇನಿಂಗ್ಸ್ ನಲ್ಲಿ ಕೇವಲ 161 ಕ್ಕೆ ಆಲೌಟ್ ಮಾಡಿ, ದ್ವಿತೀಯ ಇನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 124 ರನ್ ಗಳಿಸುವ ಮೂಲಕ ಒಟ್ಟಾರೆ 292 ರನ್ ಗಳ ಮುನ್ನಡೆ ಪಡೆದ ಖುಷಿಯಲ್ಲಿ ತಮ್ಮ ಹುಡುಗರನ್ನು ರವಿಶಾಸ್ತ್ರಿ ಪೆವಿಲಿಯನ್ ನಲ್ಲಿ ಎದ್ದು ನಿಂತು ಅಭಿನಂದಿಸಿದರು.

ಎರಡನೇ ದಿನದಂತ್ಯಕ್ಕೆ ಆಟಗಾರರು ಪೆವಿಲಿಯನ್ ನೊಳಗೆ ಹೋಗುತ್ತಿರಬೇಕಾದರೆ ಕೋಚ್ ರವಿಶಾಸ್ತ್ರಿ ಎ್ದು ನಿಂತು ಪ್ರತಿಯೊಬ್ಬ ಆಟಗಾರನ ಬೆನ್ನು ತಟ್ಟಿ ಚಪ್ಪಾಳೆ ಹೊಡೆದು ಅಭಿನಂದಿಸುತ್ತಿದ್ದುದು ಕಂಡುಬಂತು.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಕಳೆದ ಎರಡು ಟೆಸ್ಟ್ ಗಳಲ್ಲಿ ವೇಗ, ಸ್ವಿಂಗ್ ಮೂಲಕ ಭಾರತೀಯ ಬ್ಯಾಟ್ಸ್ ಮನ್ ಗಳಿಗೆ ಕಂಟಕವಾಗಿದ್ದ ಆಂಗ್ಲರಿಗೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳು ಅವರದೇ ಮದ್ದಿನ ರುಚಿ ತೋರಿಸಿದ್ದಾರೆ. ಬ್ಯಾಟ್ಸ್ ಮನ್ ಗಳ ಸುಧಾರಿತ ಪ್ರದರ್ಶನದ ನಂತರ ಎರಡನೇ ದಿನ ಆಟಕ್ಕೆ ಮೊದಲು ಸುರಿದ ಮಳೆ ಭಾರತೀಯ ಬೌಲರ್ ಗಳಿಗೆ ನೆರವಾಯಿತು.

ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ ಉತ್ತಮ ಸ್ವಿಂಗ್ ಪಡೆದರು. ಇದರಿಂದಾಗಿ ಇಷ್ಟು ದಿನ ತಾವೇ ಹೂಡಿದ್ದ ಹಳ್ಳದಲ್ಲಿ ಆಂಗ್ಲರು ಬಿದ್ದರು. ಪಾಂಡ್ಯ ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ 5 ವಿಕೆಟ್ ಕಿತ್ತರೆ, ಇಶಾಂತ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ 2, ಮೊಹಮ್ಮದ್ ಶಮಿ 1 ವಿಕೆಟ್ ಪಡೆದರು. ಏಕೈಕ ಸ್ಪಿನ್ನರ್ ಆಗಿ ಕಣಕ್ಕಿಳಿದಿದ್ದ ರವಿಚಂದ್ರನ್ ಅಶ್ವಿನ್ ಗೆ ವಿಕೆಟ್ ಇಲ್ಲದೇ ಹೋಯಿತು. ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಕೀಪಿಂಗ್ ಮೂಲಕ ಗಮನಸೆಳೆದರು. ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದಲ್ಲದೆ, ವಿಕೆಟ್ ಹಿಂದುಗಡೆ ಐದು ಕ್ಯಾಚ್ ಹಿಡಿಯುವ ಮೂಲಕ ತಮ್ಮ ಆಯ್ಕೆ ಸಮರ್ಥಿಸಿಕೊಂಡರು.

ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಕೆಎಲ್ ರಾಹುಲ್ ಮತ್ತು ಶಿಖರ್ ಧವನ್ ಉತ್ತಮ ಆರಂಭ ನೀಡಿದರು. ಧವನ್ 44 ರನ್ ಗಳಿಸಿದರೆ ರಾಹುಲ್ 36 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಚೇತೇಶ್ವರ ಪೂಜಾರ 33 ಮತ್ತು ನಾಯಕ ಕೊಹ್ಲಿ 8 ರನ್ ಗಳಿಸಿ ಸದ್ಯಕ್ಕೆ ಕ್ರೀಸ್ ನಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ