ದುಬೈ: ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಎಂಥಾ ಮರೆಗುಳಿ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಆದರೆ ಚಾಂಪಿಯನ್ಸ್ ಟ್ರೋಫಿಯನ್ನೇ ಮರೆತು ಹೋಗುತ್ತಾರೆಂದರೆ ಅವರೆಂಥಾ ಮರೆಗುಳಿ ನೀವೇ ಈ ವಿಡಿಯೋ ನೋಡಿ.
ನಿನ್ನೆ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಕಪ್ ತನ್ನದಾಗಿಸಿಕೊಂಡಿತು. ಪ್ರತಿಷ್ಠಿತ ಟೂರ್ನಮೆಂಟ್ ಗೆದ್ದ ಖುಷಿಯಲ್ಲಿ ರೋಹಿತ್ ಶರ್ಮಾ ನಿಗದಿಯಾದಂತೆ ಪತ್ರಿಕಾಗೋಷ್ಠಿಗೆ ಬಂದರು. ಈ ವೇಳೆ ಟ್ರೋಫಿಯನ್ನೂ ಜೊತೆಗೇ ತಂದಿದ್ದರು. ಇದನ್ನು ಪಕ್ಕದಲ್ಲೇ ಟೇಬಲ್ ಮೇಲೆಯೇ ಇಟ್ಟುಕೊಂಡಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ರೋಹಿತ್ ಎದ್ದು ಹೋಗುವಾಗ ಟ್ರೋಫಿ ಕೊಂಡೊಯ್ಯುವುದನ್ನೇ ಮರೆತಿದ್ದಾರೆ. ತಾವು ಮಾತ್ರ ಎದ್ದು ಹೋದಾಗ ಪಕ್ಕದಲ್ಲೇ ಇದ್ದ ಟೀಂ ಇಂಡಿಯಾ ಪ್ರತಿನಿಧಿ ಟ್ರೋಫಿಯನ್ನು ನೆನಪಿಸಿ ತೆಗೆದುಕೊಂಡು ರೋಹಿತ್ ಗೆ ನೀಡಿದ್ದಾರೆ.
ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ತಮಾಷೆಗೆ ಗುರಿಯಾಗಿದೆ. ಟಾಸ್ ವೇಳೆ ಮೊದಲು ಯಾವುದನ್ನು ಆಯ್ಕೆ ಮಾಡಬೇಕು ಎಂಬುದನ್ನೇ ರೋಹಿತ್ ಮರೆತ ವಿಡಿಯೋವೊಂದು ಹಲವು ಸಮಯದ ಹಿಂದೆ ವೈರಲ್ ಆಗಿತ್ತು. ಮೊನ್ನೆ ಮೊನ್ನೆಯಷ್ಟೇ ಮೊಬೈಲ್ ಮರೆತು ತಂಡದ ಬಸ್ ಏರುವ ಮೊದಲು ತಡಕಾಡಿದ್ದ ವಿಡಿಯೋ ವೈರಲ್ ಆಗಿತ್ತು. ಹಿಂದೊಮ್ಮೆ ಮದುವೆ ರಿಂಗ್ ನ್ನೂ ಮರೆತಿದ್ದರಂತೆ. ವಿರಾಟ್ ಕೊಹ್ಲಿ ಕೂಡಾ ಈ ವಿಚಾರಕ್ಕೆ ರೋಹಿತ್ ರನ್ನು ತಮಾಷೆ ಮಾಡುತ್ತಾರೆ. ಬಹುಶಃ ಅವರಂತಹ ಮರೆಗುಳಿಯನನ್ನು ನಾನು ನೋಡಿಯೇ ಇಲ್ಲ ಎಂದಿದ್ದರು. ಇದನ್ನು ರೋಹಿತ್ ಮತ್ತೆ ಪ್ರೂವ್ ಮಾಡಿದರು.