ದುಬೈ: ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯ ನಾಯಕನಾಗಿ ರೋಹಿತ್ ಶರ್ಮಾಗೆ ಕೊನೆಯ ಪಂದ್ಯ ಎಂದು ಹೇಳಲಾಗುತ್ತಿದೆ. ಬಿಸಿಸಿಐ ಈಗಾಗಲೇ ರೋಹಿತ್ ಜೊತೆ ಮಾತುಕತೆ ನಡೆಸಿದೆ ಎನ್ನಲಾಗಿದೆ.
ರೋಹಿತ್ ಶರ್ಮಾ ವೈಟ್ ಬಾಲ್ ಕ್ರಿಕೆಟ್ ನಲ್ಲಿ ನಾಯಕನಾಗಿ ಯಶಸ್ವಿಯಾಗಿದ್ದರು. ಟೀಂ ಇಂಡಿಯಾಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟವರು. ಇದೀಗ ಚಾಂಪಿಯನ್ಸ್ ಟ್ರೋಫಿ ಫೈನಲ್ ಗೆ ತಲುಪಿದ್ದಾರೆ
ಆದರೆ ಇತ್ತೀಚೆಗಿನ ದಿನಗಳಲ್ಲಿ ರೋಹಿತ್ ಫಾರ್ಮ್ ಮೊದಲಿನಂತಿಲ್ಲ. ಪ್ರತೀ ಪಂದ್ಯದಲ್ಲೂ ಅವರ ಸ್ಕೋರ್ ಹೆಚ್ಚೆಂದರೆ 30 ರನ್ ದಾಟುವುದಿಲ್ಲ. ಒಬ್ಬ ಆರಂಭಿಕನಾಗಿ ಕೇವಲ 20-30 ರನ್ ಗಳಿಸಿ ಔಟಾಗುವುದರಿಂದ ತಂಡವೂ ಸಂಕಷ್ಟಕ್ಕೆ ಸಿಲುಕುತ್ತಿದೆ. ಇದರ ಬಗ್ಗೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡಾ ಟೀಕಿಸಿದ್ದಾರೆ.
ಹೀಗಾಗಿ ಫೈನಲ್ ಪಂದ್ಯದಲ್ಲೂ ಬ್ಯಾಟಿಂಗ್ ನಲ್ಲಿ ವಿಫಲರಾದರೆ ಪಂದ್ಯದ ಫಲಿತಾಂಶ ಏನೇ ಇದ್ದರೂ ರೋಹಿತ್ ಮುಲಾಜಿಲ್ಲದೇ ನಿವೃತ್ತಿಯಾಗಲಿದ್ದಾರೆ ಎನ್ನುತ್ತಿದೆ ಮೂಲಗಳು. ಮುಂಬರುವ ಏಕದಿನ ವಿಶ್ವಕಪ್ ಗೆ ಇನ್ನು ಎರಡು ವರ್ಷವಿದೆ.
ಹೀಗಾಗಿ ಅಷ್ಟರಲ್ಲಿ ಹೊಸ ನಾಯಕನನ್ನು ತಯಾರಿ ಮಾಡಲು ಸಮಯ ಬೇಕಾಗುತ್ತದೆ. ಇದರಿಂದ ರೋಹಿತ್ ಗೆ ನಾಯಕತ್ವದಿಂದ ನಿವೃತ್ತಿಯಾಗಲು ಬಿಸಿಸಿಐ ಸೂಚಿಸಿದೆ ಎಂಬ ಮಾತು ಕೇಳಿಬರುತ್ತಿದೆ. ಟಿ20 ವಿಶ್ವಕಪ್ ಗೆದ್ದ ಬಳಿಕ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಟಿ20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ರೋಹಿತ್ ರಿಂದ ದೊಡ್ಡ ಘೋಷಣೆಯೊಂದು ಬರಲಿದೆ ಎನ್ನಲಾಗಿದೆ.