ರಾಂಚಿ: ರಾಜ್ ಕೋಟ್ ನಲ್ಲಿ ಟೀಂ ಇಂಡಿಯಾ ಪರ ಸರ್ಫರಾಜ್ ಖಾನ್ ಮೊದಲ ಬಾರಿಗೆ ಭಾರತದ ಪರ ಆಡುವ ಅವಕಾಶ ಸಿಕ್ಕಾಗ ಅವರ ತಂದೆ ಕಣ್ಣಿರಿಟ್ಟಿದ್ದರು.
ಮಗನನ್ನು ಮೊದಲ ಬಾರಿಗೆ ಭಾರತೀಯ ಜೆರ್ಸಿ ತೊಟ್ಟು ಮೈದಾನದಲ್ಲಿ ನೋಡಿ ತಂದೆ ಖುಷಿಯಿಂದ ಕಣ್ಣೀರು ಹಾಕಿದ್ದರು. ಅಷ್ಟೇ ಅಲ್ಲದೇ, ಕ್ಯಾಪ್ಟನ್ ರೋಹಿತ್ ಶರ್ಮಾ ಕೈಕುಲುಕಲು ಬಂದಾಗ ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳಿ, ಅವನ ಬಗ್ಗೆ ಗಮನಹರಿಸಿ ಎಂದಿದ್ದರು. ಅದಕ್ಕೆ ರೋಹಿತ್ ಕೂಡಾ ಅರೇ ಸರ್.. ಖಂಡಿತಾ ಮಾಡ್ತೀನಿ ಎಂದು ಕೈ ಕುಲುಕಿ ಪ್ರಾಮಿಸ್ ಮಾಡಿದ್ದರು. ಆ ಭರವಸೆಯನ್ನು ರೋಹಿತ್ ಉಳಿಸಿಕೊಂಡಿದ್ದಾರೆ.
ರಾಂಚಿ ಟೆಸ್ಟ್ ಪಂದ್ಯದ ಮೂರನೇ ದಿನ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ವೇಳೆ ರೋಹಿತ್ ಹೆಚ್ಚು ಕಡಿಮೆ ಸರ್ಫರಾಜ್ ಗೆ ತಂದೆಯಂತೆ ಕಿವಿ ಹಿಂಡಿ ಬುದ್ಧಿ ಹೇಳಿದ್ದಾರೆ. ಕುಲದೀಪ್ ಯಾದವ್ ಬೌಲಿಂಗ್ ಮಾಡುತ್ತಿದ್ದಾಗ ರೋಹಿತ್ ಬೌಂಡರಿ ಗೆರೆ ಬಳಿ ನಿಂತಿದ್ದ ಸರ್ಫರಾಜ್ ರನ್ನು ಕ್ರೀಸ್ ಪಕ್ಕ ಫೀಲ್ಡಿಂಗ್ ಮಾಡಲು ಸೂಚಿಸಿದರು. ತಕ್ಷಣವೇ ದೂರದಿಂದ ಓಡಿ ಬಂದ ಸರ್ಫರಾಜ್ ನಾಯಕನ ಅಪ್ಪಣೆ ಪಾಲಿಸಿದರು.
ಆದರೆ ಸಮಯ ವ್ಯರ್ಥವಾಗುತ್ತದೆಂದು ಹೆಲ್ಮೆಟ್ ಧರಿಸದೇ ಫೀಲ್ಡ್ ಮಾಡಲು ಹೊರಟಿದ್ದರು. ಆಗ ತಕ್ಷಣವೇ ಸರ್ಫರಾಜ್ ಪಕ್ಕ ಬಂದ ರೋಹಿತ್ ಹೆಲ್ಮೆಟ್ ಹಾಕು, ಇಲ್ಲದಿದ್ದರೆ ಅಪಾಯವಾಗಬಹುದು. ಓಯ್ ಹೀರೋ ಆಗಲು ಹೋಗಬೇಡ ಎಂದು ಬುದ್ಧಿವಾದ ಹೇಳಿದರು. ಅದಕ್ಕೆ ಅಂಪಾಯರ್ ಕೂಡಾ ಸಾಥ್ ನೀಡಿದರು. ಹೆಲ್ಮೆಟ್ ಇಲ್ಲದೇ ಆ ಜಾಗದಲ್ಲಿ ಫೀಲ್ಡಿಂಗ್ ಮಾಡುವುದು ಅಪಾಯ ಎಂದು ಬುದ್ಧಿ ಹೇಳಿದರು. ಕೊನೆಗೆ ಸರ್ಫರಾಜ್ ತಮ್ಮ ನಾಯಕನ ಮಾತು ಕೇಳಬೇಕಾಯಿತು. ಸುರಕ್ಷತೆಯಿಲ್ಲದೇ ಅಪಾಯಕಾರಿ ಸ್ಥಳದಲ್ಲಿ ಫೀಲ್ಡಿಂಗ್ ಮಾಡಲು ಹೊರಟ ಸರ್ಫರಾಜ್ ಗೆ ರೋಹಿತ್ ತಂದೆಯ ಸ್ಥಾನದಲ್ಲಿ ನಿಂತು ಬುದ್ಧಿ ಹೇಳಿದರು.