ದೇಶಕ್ಕೆ ಆ ವಿಶ್ವಕಪ್ ಗೆಲ್ಲದೇ ನಿವೃತ್ತಿಯಾಗಲ್ಲ ಎಂದ ರೋಹಿತ್ ಶರ್ಮಾ

Krishnaveni K

ಶುಕ್ರವಾರ, 12 ಏಪ್ರಿಲ್ 2024 (14:56 IST)
ಮುಂಬೈ: ಕಳೆದ ಬಾರಿ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಟೀಂ ಇಂಡಿಯಾ ಸೋಲು ಭಾರತೀಯ ಕ್ರಿಕೆಟ್ ಪ್ರೇಮಿಗಳು ಮರೆಯುವಂತೇ ಇಲ್ಲ. ಇದೀಗ ರೋಹಿತ್ ಶರ್ಮಾ ಸಂದರ್ಶನವೊಂದರಲ್ಲಿ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವ ಬಗ್ಗೆ ಮತ್ತು ತಮ್ಮ ನಿವೃತ್ತಿ ಬಗ್ಗೆ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ತಮ್ಮ ನಿವೃತ್ತಿ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ರೋಹಿತ್ ಶರ್ಮಾ ಮನಬಿಚ್ಚಿ ಮಾತನಾಡಿದ್ದಾರೆ. 36 ವರ್ಷದ ಹಿಟ್ ಮ್ಯಾನ್ ನಿವೃತ್ತಿ ಯಾವಾಗ ಎಂದು ಆಗಾಗ ಪ್ರಶ್ನೆಗಳು ಕೇಳಿಬರುತ್ತಲೇ ಇದೆ. ರೋಹಿತ್ ಈ ಸಂದರ್ಶನದಲ್ಲಿ ಎಲ್ಲದಕ್ಕೂ ಉತ್ತರ ನೀಡಿದ್ದಾರೆ.

‘ನಾನೀಗ ನಿವೃತ್ತಿ ಬಗ್ಗೆ ಯೋಚಿಸುತ್ತಲೇ ಇಲ್ಲ. ಆದರೆ ಜೀವನ ಎಲ್ಲಿಗೆ ತೆಗೆದುಕೊಂಡು ಹೋಗುತ್ತದೆ ನನಗೆ ಗೊತ್ತಿಲ್ಲ. ಈಗ ನಾನು ಉತ್ತಮವಾಗಿ ಆಡುತ್ತಿದ್ದೇನೆ. ಹೀಗಾಗಿ ಇನ್ನೂ ಕೆಲವು ವರ್ಷ ಆಡಬಹುದು ಎಂದುಕೊಂಡಿದ್ದೇನೆ. ನಾನು ನಿಜವಾಗಿಯೂ ನಮ್ಮ ದೇಶಕ್ಕಾಗಿ ಒಂದು ವಿಶ್ವಕಪ್ ಮತ್ತು 2025 ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆದ್ದುಕೊಡಲು ಬಯಸುತ್ತೇನೆ. ಭಾರತ ಗೆಲ್ಲುತ್ತದೆ ಎಂದು ನನಗೆ ಭರವಸೆಯಿದೆ’ ಎಂದಿದ್ದಾರೆ.

‘ನನ್ನ ಪ್ರಕಾರ 50 ಓವರ್ ಗಳ ವಿಶ್ವಕಪ್ ನಿಜವಾದ ವಿಶ್ವಕಪ್. ನಾವು ವಿಶ್ವಕಪ್ ನೋಡುತ್ತಾ ಬೆಳೆದವರು. ಈ ಬಾರಿ ನಮ್ಮ ತವರು ಪ್ರೇಕ್ಷಕರ ಎದುರೇ ನಡೆದಿತ್ತು. ನಾವು ಫೈನಲ್ ತನಕ ಅಷ್ಟು ಚೆನ್ನಾಗಿ ಆಡಿದ್ದೆವು. ನಾವು ಸೋಲಬಹುದು ಎಂದು ಎಲ್ಲಿಯೂ ನನಗೆ ಸುಳಿವೂ ಇರಲಿಲ್ಲ. ಅದೊಂದು ಕೆಟ್ಟ ದಿನವಾಗಿತ್ತು ಎಂದಷ್ಟೇ ಹೇಳಬಹುದು’ ಎಂದು ರೋಹಿತ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ