ಶತಕದ ಬರ ನೀಗಿಸಿಕೊಂಡ ರೋಹಿತ್ ಶರ್ಮಾ: ಶುಬ್ಮನ್ ಗಿಲ್ ಮತ್ತೊಂದು ಶತಕ
ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ, ಶುಬ್ಮನ್ ಗಿಲ್ ಲೀಲಾಜಾಲವಾಗಿ ಎದುರಾಳಿಗಳ ಎಸೆತವನ್ನು ಚೆಂಡಾಡಿದರು. ರೋಹಿತ್ 51 ಇನಿಂಗ್ಸ್ ಗಳ ಬಳಿಕ ಶತಕ ಬಾರಿಸಿದ್ದು ವಿಶೇಷವಾಗಿತ್ತು. ಒಟ್ಟು 85 ಎಸೆತ ಎದುರಿಸಿದ ಅವರು 101 ರನ್ ಗಳಿಸಿ ಔಟಾದರು. ಅವರ ಜೊತೆಗೇ ಶುಬ್ಮನ್ ಗಿಲ್ ಕೂಡಾ ಮತ್ತೊಂದು ಶತಕ ಸಿಡಿಸಿದರು. ಮೊದಲ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದ ಅವರು ಈ ಪಂದ್ಯದಲ್ಲಿ 112 ರನ್ ಗಳಿಸಿ ಔಟಾದರು.
ಈ ಇಬ್ಬರೂ ದ್ವಿಶತಕದ ಜೊತೆಯಾಟವಾಡಿದರು. ಇವರಿಬ್ಬರೂ ಔಟಾಗುತ್ತಿದ್ದಂತೇ ಟೀಂ ಇಂಡಿಯಾ ಆಟ ಕಳೆಗುಂದಿತು. ವಿರಾಟ್ ಕೊಹ್ಲಿ ಉತ್ತಮವಾಗಿ ಆಡುತ್ತಿದ್ದರೂ 36 ರನ್ ಗೆ ಔಟಾದರು. ಇಶಾನ್ ಕಿಶನ್ ರನೌಟ್ ಆಗುತ್ತಿದ್ದ ವಿರಾಟ್ ಕೊಹ್ಲಿಯನ್ನು ರಕ್ಷಿಸಲು ತಾವೇ ವಿಕೆಟ್ ಬಲಿದಾನ ಮಾಡಿದರು. ಸೂರ್ಯಕುಮಾರ್ ಯಾದವ್ 14, ವಾಷಿಂಗ್ಟನ್ ಸುಂದರ್ 9 ರನ್ ಗಳಿಸಿ ಔಟಾದರು. ಇದರಿಂದಾಗಿ ಟೀಂ ಇಂಡಿಯಾ ಕೊಂಚ ಹಿನ್ನಡೆ ಅನುಭವಿಸಿತು. ಆದರೆ ಇನ್ನೊಂದೆಡೆ ನಿಂತು ಆಡಿದ ಹಾರ್ದಿಕ್ ಪಾಂಡ್ಯ ಕೇವಲ 38 ಎಸೆತಗಳಿಂದ 54 ರನ್ ಗಳಿಸಿ ಭಾರತದ ಮೊತ್ತವನ್ನು 400 ರ ಸಮೀಪ ತಲುಪಿಸಿದರು. ಹಾರ್ದಿಕ್ ಕೂಡಾ ಫಾರ್ಮ್ ಕಂಡುಕೊಂಡಿದ್ದು ಪ್ಲಸ್ ಪಾಯಿಂಟ್ ಆಯಿತು. ಇದರೊಂದಿಗೆ ಭಾರತ ಮತ್ತೆ 350 ಪ್ಲಸ್ ರನ್ ಗಳಿಸಿದಂತಾಗಿದೆ.