ರಾಂಚಿ: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯ ಗೆಲ್ಲುವುದರ ಜೊತೆಗೆ ಸರಣಿ ಗೆಲುವು ಸಾಧಿಸಿದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇತ್ತೀಚೆಗೆ ಕುಂಟು ನೆಪ ಹೇಳಿ ತಂಡದಿಂದ ತಪ್ಪಿಸಿಕೊಂಡ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಗೆ ಸಖತ್ ಟಾಂಗ್ ಕೊಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧ ಸರಣಿ ಗೆಲುವಿನ ಬಳಿಕ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ ರೋಹಿತ್ ಯುವ ಆಟಗಾರರ ಬಗ್ಗೆ ವಿಶೇಷವಾಗಿ ಕೊಂಡಾಡಿದ್ದಾರೆ. ಜೊತೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಆಡಲು ಯುವ ಕ್ರಿಕೆಟಿಗರು ಮನಸ್ಸು ಮಾಡಬೇಕು ಎಂದೂ ಒತ್ತಿ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ ಎನ್ನುವುದು ಅತ್ಯಂತ ಕಠಿಣ ಮಾದರಿಯ ಕ್ರಿಕೆಟ್. ಈ ಮಾದರಿಯ ಕ್ರಿಕೆಟ್ ನಲ್ಲಿ ನಿಮಗೆ ಯಶಸ್ಸು ಸಿಗಬೇಕಾದರೆ ಗೆಲುವಿನ ಹಸಿವು ಇರಬೇಕು. ಯಾವ ಆಟಗಾರರಲ್ಲಿ ಗೆಲುವಿನ ಹಸಿವಿದೆ, ಯಾರಲ್ಲಿ ಇಲ್ಲ ಎನ್ನವುದು ನೋಡಿದರೇ ಗೊತ್ತಾಗುತ್ತದೆ ಎಂದು ರೋಹಿತ್ ಹೇಳಿದ್ದಾರೆ. ರೋಹಿತ್ ಈ ಮಾತನ್ನು ಮಾರ್ಮಿಕವಾಗಿ ಹೇಳಿದ್ದು ಇದನ್ನು ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಆಡುವುದನ್ನು ತಪ್ಪಿಸಿಕೊಂಡಿರುವ ಇಶಾನ್ ಕಿಶನ್ ಮತ್ತು ಗಾಯದ ನೆಪದಿಂದ ತಂಡದಿಂದ ಹೊರಗುಳಿದಿರುವ ಶ್ರೇಯಸ್ ಅಯ್ಯರ್ ಉದ್ದೇಶಿಸಿಯೇ ಹೇಳಿದ್ದಾರೆ ಎಂದು ಅಭಿಮಾನಿಗಳು ಅರ್ಥ ಮಾಡಿಕೊಂಡಿದ್ದಾರೆ.
ಮಾನಸಿಕವಾಗಿ ಬಳಲಿರುವುದಾಗಿ ನೆಪ ಹೇಳಿ ಟೆಸ್ಟ್ ತಂಡದಿಂದ ಹೊರಗುಳಿದಿರುವ ಇಶಾನ್ ಕಿಶನ್ ಐಪಿಎಲ್ ಗೆ ತಯಾರಾಗುತ್ತಿದ್ದಾರೆ. ರಣಜಿ ಆಡುವುದನ್ನೂ ತಪ್ಪಿಸಿಕೊಂಡಿದ್ದಾರೆ. ಇದು ಬಿಸಿಸಿಐ, ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ಸಿಟ್ಟು ತರಿಸಿದೆ. ಅತ್ತ ಶ್ರೇಯಸ್ ಅಯ್ಯರ್ ಕೂಡಾ ರಣಜಿ ಆಡುವುದನ್ನು ತಪ್ಪಿಸಲು ಗಾಯದ ನೆಪ ಹೇಳಿದ್ದರು.