ಮುಂಬೈ: 2024 ರ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ನಾಯಕತ್ವವನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬ ಅನುಮಾನಗಳಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತೆರೆ ಎಳೆದಿದ್ದಾರೆ.
ಟಿ20 ವಿಶ್ವಕಪ್ ನಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾರೇ ಮುನ್ನಡೆಸಲಿದ್ದಾರೆ ಎಂದು ಜಯ್ ಶಾ ಸ್ಪಷ್ಟಪಡಿಸಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ನಮಗೆ ನಂಬಿಕೆಯಿದೆ ಎಂದು ಅವರು ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ಉಪನಾಯಕನಾಗಿರಲಿದ್ದಾರೆ ಎಂದೂ ಅವರು ಹೇಳಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ಗೆ ಭಾರತ ತಂಡಕ್ಕೆ ನಾಯಕ ಯಾರು ಎಂಬ ಗೊಂದಲಗಳಿಗೆ ಅವರು ತೆರೆ ಎಳೆದಿದ್ದಾರೆ.
ರಾಜ್ ಕೋಟ್ ಮೈದಾನದ ಮರುನಾಮಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಜಯ್ ಶಾ, ನಾನು ನಿಮಗೆ ಭರವಸೆ ನೀಡುತ್ತೇನೆ. ವೆಸ್ಟ್ ಇಂಡೀಸ್, ಅಮೆರಿಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನ್ನು ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ ಬಾರಿ ಭಾರತವೇ ಗೆಲ್ಲಲಿದೆ ಎಂದು ಘೋಷಿಸಿದ್ದಾರೆ. ಅವರು ಇಂತಹದ್ದೊಂದು ಘೋಷಣೆ ಮಾಡುವಾಗ ಕಾರ್ಯಕ್ರಮದಲ್ಲಿದ್ದ ರೋಹಿತ್ ಶರ್ಮಾ ಕೂಡಾ ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ.
ಟಿ20 ವಿಶ್ವಕಪ್ 2024 ಜೂನ್ 1 ರಿಂದ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯಲಿದೆ. ಭಾರತ ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಜೂನ್ 5 ರಂದು ಆಡಲಿದೆ. ಜೂನ್ 29 ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.