ನ್ಯೂಜಿಲೆಂಡ್ ನಾಯಕನ ಬೆಪ್ಪು ನಿರ್ಧಾರಕ್ಕೆ ಬೆಲೆ ತೆತ್ತ ರಾಸ್ ಟೇಲರ್!
ಸೋಮವಾರ, 4 ಫೆಬ್ರವರಿ 2019 (09:16 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಐದನೇ ಏಕದಿನ ಪಂದ್ಯದಲ್ಲಿ ಔಟ್ ಆಗದೇ ಇದ್ದರೂ, ಡಿಆರ್ ಎಸ್ ಬಳಸುವ ಅವಕಾಶವಿದ್ದರೂ ನ್ಯೂಜಿಲೆಂಡ್ ನಾಯಕನ ಬೆಪ್ಪು ನಿರ್ಧಾರದಿಂದ ಪ್ರಮುಖ ಬ್ಯಾಟ್ಸ್ ಮನ್ ರಾಸ್ ಟೇಲರ್ ಪೆವಿಲಿಯನ್ ಗೆ ಮರಳುವಂತಾಯಿತು.
ನ್ಯೂಜಿಲೆಂಡ್ ಇನಿಂಗ್ಸ್ ನ 11 ನೇ ಓವರ್ ನಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ರಾಸ್ ಟೇಲರ್ ಪ್ಯಾಡ್ ಗೆ ಚೆಂಡು ಬಡಿದಿತ್ತು. ಅಂಪಾಯರ್ ತಕ್ಷಣವೇ ಟೇಲರ್ ಔಟ್ ಎಂದು ಘೋಷಿಸಿದರು. ಆದರೆ ಟೇಲರ್ ಗೆ ಅನುಮಾನವಿತ್ತು.
ಈ ಕಾರಣಕ್ಕೆ ಅವರು ಕ್ರೀಸ್ ನ ಇನ್ನೊಂದು ತುದಿಯಲ್ಲಿದ್ದ ನಾಯಕ ಕೇನ್ ವಿಲಿಯಮ್ಸ್ ಕಡೆಗೆ ಔಟ್ ಹೌದೇ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಬೆಪ್ಪಾಗಿ ಕೇನ್ ಔಟ್ ಎನ್ನುವಂತೆ ಸೂಚಿಸಿದರು. ಡಿಆರ್ ಎಸ್ ಬಳಸದೇ ಮರುಕ್ಷಣವೇ ಟೇಲರ್ ಪೆವಿಲಿಯನ್ ಗೆ ಮರಳಿದರು. ಆದರೆ ರಿಪ್ಲೇನಲ್ಲಿ ನೋಡಿದಾಗ ಟೇಲರ್ ನಾಟೌಟ್ ಆಗಿದ್ದರು. ಆಗ ಅವರು ಕೇವಲ 1 ರನ್ ಗಳಿಸಿದ್ದರಷ್ಟೇ.
ಒಂದು ವೇಳೆ ಟೇಲರ್ ಡಿಆರ್ ಎಸ್ ಬಳಕೆ ಮಾಡಿದ್ದರೆ ನ್ಯೂಜಿಲೆಂಡ್ ಗೆ ಸೋಲು ತಪ್ಪಿಸುತ್ತಿದ್ದರೇನೋ. ಆದರೆ ಕೇನ್ ವಿಲಿಯಮ್ಸ್ ರಿಂದಾಗಿ ಅದು ತಪ್ಪಿತು. ಈ ಬಗ್ಗೆ ಪಂದ್ಯ ಮುಗಿದ ಬಳಿಕ ಸ್ವತಃ ಕೇನ್ ವಿಲಿಯಮ್ಸ್ ತಮ್ಮ ನಿರ್ಧಾರವನ್ನು ತಾವೇ ಹಳಿದುಕೊಂಡಿದ್ದಾರೆ. ಆದರೆ ಏನು ಪ್ರಯೋಜನ? ಪಂದ್ಯ ಭಾರತದ ಕೈವಶವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ