ವಿವಾದಾತ್ಮಕ ರನೌಟ್ ಬಳಿಕ ಜಡೇಜಾ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸರ್ಫರಾಜ್ ಖಾನ್

Krishnaveni K

ಶುಕ್ರವಾರ, 16 ಫೆಬ್ರವರಿ 2024 (11:06 IST)
Photo Courtesy: Twitter

ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ರನೌಟ್ ಆಗಿ ನಿರಾಸೆಗೊಳಗಾದ ಸರ್ಫರಾಜ್ ಖಾನ್ ಈ ಬಗ್ಗೆ ನಿನ್ನೆಯ ದಿನದಂತ್ಯಕ್ಕೆ ಪ್ರತಿಕ್ರಿಯಿಸಿದ್ದಾರೆ.


ರವೀಂದ್ರ ಜಡೇಜಾ ಮಾಡಿದ ತಪ್ಪಿನಿಂದಾಗಿ ಸರ್ಫರಾಜ್ ರನೌಟ್ ಆದರು. ಹೀಗಾಗಿ ಜಡೇಜಾ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಚೊಚ್ಚಲ ಪಂದ್ಯವಾಡಿದ ಸರ್ಫರಾಜ್ ಖಾನ್ 65 ಎಸೆತಗಳಿಂದ 62 ರನ್ ಸಿಡಿಸಿ ಶತಕ ಸಿಡಿಸುವ ಭರವಸೆ ಮೂಡಿಸಿದ್ದರು. ಆದರೆ ರನೌಟ್ ಆದಾಗ ನಾಯಕ ರೋಹಿತ್ ಶರ್ಮಾ, ಸರ್ಫರಾಜ್ ಖಾನ್ ಹಾಗೂ ಅವರ ಕುಟುಂಬಸ್ಥರು ಸೇರಿದಂತೆ ಅಭಿಮಾನಿಗಳೆಲ್ಲರೂ ತೀವ್ರ ನಿರಾಸೆಗೊಳಗಾದರು.

ತಮ್ಮ ಶತಕ ಪೂರ್ತಿ ಮಾಡಲು ಜಡೇಜಾ ಸ್ವಾರ್ಥಿಯಾದರು ಎಂದು ಟೀಕೆಗೆ ಗುರಿಯಾಗಿದ್ದರು. ದಿನದಂತ್ಯಕ್ಕೆ ಈ ಘಟನೆ ಬಗ್ಗೆ ಸರ್ಫರಾಜ್ ಬಳಿ ಜಡೇಜಾ ಬಹಿರಂಗ ಕ್ಷಮೆ ಯಾಚಿಸಿದ್ದರು ಕೂಡಾ. ವಿಶೇಷವೆಂದರೆ ನಿನ್ನೆಯ ದಿನದಂತ್ಯದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸರ್ಫರಾಜ್ ಖಾನ್ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕ್ರಿಕೆಟ್ ನಲ್ಲಿ ಇಂತಹ ಘಟನೆಗಳು ಸಾಮಾನ್ಯ. ಸಂವಹನ ಕೊರತೆಯಿಂದ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ರನೌಟ್ ಆಗುತ್ತೇವೆ. ಕೆಲವೊಮ್ಮೆ ರನ್ ಸಿಗುತ್ತದೆ. ಇದೆಲ್ಲಾ ಮಾಮೂಲು’ ಎಂದಿದ್ದಾರೆ. ಜೊತೆಗೆ ಜಡೇಜಾ ತಮಗೆ ನೀಡಿದ ಬೆಂಬಲದ ಬಗ್ಗೆಯೂ ಮಾತನಾಡಿದ್ದಾರೆ. ‘ನನ್ನ ಸರದಿಗಾಗಿ ನಾನು ಸುಮಾರು ನಾಲ್ಕು ಗಂಟೆ ಕಾಲ ಪ್ಯಾಡ್ ಕಟ್ಟಿಕೊಂಡು ಕಾದಿದ್ದೆ. ನಾನು ಇಷ್ಟು ದಿನ ಆಡುವ ಅವಕಾಶಕ್ಕಾಗಿ ತಾಳ್ಮೆಯಿಂದ ಕಾದಿದ್ದೆ. ಹೀಗಾಗಿ ಇಂದು ನಾಲ್ಕು ಗಂಟೆ ಕಾಯುವುದರಲ್ಲಿ ತಪ್ಪಿಲ್ಲ ಎನಿಸಿತು. ಭೋಜನ ವಿರಾಮದ ವೇಳೆ ಜಡೇಜಾರಲ್ಲಿ ಮಾತನಾಡಿದ್ದೆ. ನಾನು ಬ್ಯಾಟಿಂಗ್ ಮಾಡುವಾಗ ನನ್ನನ್ನು ಮಾತನಾಡಿಸುತ್ತಿರಿ. ಮೊದಲ ಬಾರಿಗೆ ಬ್ಯಾಟಿಂಗ್ ಮಾಡುತ್ತಿದ್ದೇನೆ. ಕೊಂಚ ನರ್ವಸ್ ಆಗಿದ್ದೆ. ಆದರೆ ಮಾತನಾಡುತ್ತಿದ್ದರೆ ನನಗೆ ಬ್ಯಾಟಿಂಗ್ ಮಾಡಲು ಅನುಕೂಲವಾಗುತ್ತದೆ ಎಂದಿದ್ದೆ. ಅವರು ನಾನು ಕ್ರೀಸ್ ನಲ್ಲಿದ್ದಷ್ಟೂ ಹೊತ್ತು ಮಾತನಾಡಿಸುತ್ತಲೇ ಇದ್ದರು. ಈ ಮೂಲಕ ನನಗೆ ಬೆಂಬಲ ಕೊಟ್ಟರು’ ಎಂದು ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ