ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಚೊಚ್ಚಲ ಪಂದ್ಯವಾಡುತ್ತಿರುವ ಸರ್ಫರಾಜ್ ಖಾನ್ ಶತಕದತ್ತ ಧಾವಿಸುತ್ತಿದ್ದರು. ಆದರೆ ಈ ವೇಳೆ ಜಡೇಜಾ ಮಾಡಿದ ತಪ್ಪಿನಿಂದ ರನೌಟ್ ಆಗಬೇಕಾಯಿತು.
ಈ ಘಟನೆ ನಿನ್ನೆಯ ದಿನದ ಹೈಲೈಟ್ ಆಯಿತು. 66 ಎಸೆತಗಳಿಂದ 62 ರನ್ ಗಳಿಸಿದ್ದಾಗ ಸರ್ಫರಾಜ್ ದುರದೃಷ್ಟವಶಾತ್ ರನೌಟ್ ಆದರು. ಇದಕ್ಕೆ ಕಾರಣ ರವೀಂದ್ರ ಜಡೇಜಾ. ಶತಕಕ್ಕೆ 1 ರನ್ ಹಿನ್ನಡೆಯಲ್ಲಿದ್ದ ಜಡೇಜಾ ಮೊದಲು ಸಿಂಗಲ್ಸ್ ಗೆ ಓಡಲು ಯತ್ನಿಸಿ ಬಳಿಕ ಹಿಂದೆ ಸರಿದರು. ಆದರೆ ಅಷ್ಟರಲ್ಲಿ ಸರ್ಫರಾಜ್ ಮುನ್ನುಗ್ಗಿದ್ದರು. ಈ ಕನ್ ಫ್ಯೂಷನ್ ನಲ್ಲಿ ಅವರು ರನೌಟ್ ಆದರು.
ಸರ್ಫರಾಜ್ ರನೌಟ್ ಆಗುತ್ತಿದ್ದಂತೇ ಪೆವಿಲಿಯನ್ ನಲ್ಲಿ ಕೂತಿದ್ದ ರೋಹಿತ್ ಶರ್ಮಾ ತೀವ್ರ ಅಸಮಾಧಾನಗೊಂಡರು. ಸಿಟ್ಟಿನಿಂದ ಕ್ಯಾಪ್ ನೆಲಕ್ಕೆ ಕುಕ್ಕಿ ರೋಹಿತ್ ಅಸಮಾಧಾನ ಹೊರಹಾಕಿದ್ದು ಕಂಡುಬಂತು. ಮೊದಲ ಪಂದ್ಯವಾಡುತ್ತಿದ್ದ ಸರ್ಫರಾಜ್ ಗೆ ದಾಖಲೆಯ ಶತಕ ಮಾಡುವ ಅವಕಾಶವಿತ್ತು. ಆದರೆ ಅದನ್ನು ಕಸಿದುಕೊಂಡಿದ್ದು ಜಡೇಜಾ. ಹೀಗಾಗಿ ರೋಹಿತ್ ಸಿಟ್ಟಾಗಿದ್ದರು. ಪಂದ್ಯ ವೀಕ್ಷಿಸುತ್ತಿದ್ದ ಸರ್ಫರಾಜ್ ತಂದೆ, ಕುಟುಂಬಸ್ಥರೂ ತೀವ್ರ ನಿರಾಸೆಗೊಂಡರು.
ಜಡೇಜಾ ತಮ್ಮ ಶತಕಕ್ಕಾಗಿ ಸರ್ಫರಾಜ್ ವಿಕೆಟ್ ಬಲಿ ಕೊಟ್ಟರು ಎಂದು ನೆಟ್ಟಿಗರು ಅವರನ್ನು ಜರೆದಿದ್ದಾರೆ. ಕೊನೆಗೆ ಸಂಜೆ ರವೀಂದ್ರ ಜಡೇಜಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಸರ್ಫರಾಜ್ ಗೆ ಕ್ಷಮೆ ಯಾಚಿಸಿದರು. ಇದು ನನ್ನ ತಪ್ಪಾಗಿತ್ತು. ಸರ್ಫರಾಜ್ ಅತ್ಯುತ್ತಮವಾಗಿ ಆಡಿದರು ಎಂದು ಜಡೇಜಾ ಕ್ಷಮೆ ಕೇಳಿದರು.
ಆದರೆ ಅಭಿಮಾನಿಗಳಿಗೆ ಮಾತ್ರ ಸಿಟ್ಟು ಕಡಿಮೆಯಾಗಿಲ್ಲ. ಶತಕ ಸಿಡಿಸಿದರೂ ಜಡೇಜಾರನ್ನು ಸ್ವಾರ್ಥಿ ಎಂದು ಹೀಗೆಳೆದಿದ್ದಾರೆ. ಬಹಳ ದಿನಗಳ ಕಾಯುವಿಕೆಯ ನಂತರ ಸರ್ಫರಾಜ್ ಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿತ್ತು. ಆದರೆ ಅಷ್ಟರಲ್ಲೇ ಇಂತಹದ್ದೊಂದು ಘಟನೆ ನಡೆದಿದ್ದು ದುರದೃಷ್ಟಕರ.