ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಕಾರು ಏರಲು ಹೊರಟಾಗ ಭಿಕ್ಷುಕಿಯೊಬ್ಬಳು ಅವರಿಗೆ ಮುತ್ತಿಗೆ ಹಾಕಿದ್ದು, ದುಡ್ಡಿಗಾಗಿ ಬೇಡಿಕೆಯಿಟ್ಟಿದ್ದಾಳೆ. ಇದಕ್ಕೆ ಅಯ್ಯರ್ ಪ್ರತಿಕ್ರಿಯೆ ಏನಿತ್ತು ನೋಡಿ.
ಸದ್ಯಕ್ಕೆ ಕ್ರಿಕೆಟ್ ನಿಂದ ಬಿಡುವಿನಲ್ಲಿರುವ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ತಮ್ಮ ತವರು ಮುಂಬೈನಲ್ಲಿ ಶಾಪಿಂಗ್ ಗೆಂದು ಬಂದಿದ್ದಾರೆ. ಸಾಮಾನ್ಯವಾಗಿ ಕ್ರಿಕೆಟಿಗರು ಹೊರಗೆ ಕಾಣಿಸಿಕೊಂಡರೆ ಅವರ ಬಳಿ ಆಟೋಗ್ರಾಫ್, ಸೆಲ್ಫೀಗಾಗಿ ಜನ ಮುಗಿಬೀಳುವುದು ಹೊಸದೇನಲ್ಲ. ಅದೇ ರೀತಿ ಶ್ರೇಯಸ್ ಕೂಡಾ ಶಾಪಿಂಗ್ ಮುಗಿಸಿ ಇನ್ನೇನು ಕಾರು ಏರಬೇಕು ಎನ್ನುವಾಗ ಕೆಲವೊಂದು ಜನ ಅವರನ್ನು ಮುತ್ತಿಕೊಂಡಿದ್ದಾರೆ.
ಈ ಪೈಕಿ ಓರ್ವ ಭಿಕ್ಷುಕಿ ಮಹಿಳೆ ಮತ್ತು ಆಕೆಯ ಜೊತೆ ಒಬ್ಬ ಬಾಲಕನೂ ಇದ್ದರು. ಶ್ರೇಯಸ್ ಕಾರು ಏರಲು ಹೊರಟಾಗ ಮಹಿಳೆ ಶ್ರೇಯಸ್ ಕೈ ಮುಟ್ಟಿ ಏನಾದರೂ ಕೊಡಿ ಎಂದು ಅಂಗಲಾಚುತ್ತಾಳೆ. ಮಹಿಳೆಯ ವರ್ತನೆಯಿಂದ ಕೊಂಚ ಗಲಿಬಿಲಿಗೊಳಗಾದ ಶ್ರೇಯಸ್, ಸ್ವಲ್ಪ ತಡಿ ಕೊಡ್ತೀನಿ ಎಂದು ಕೊಂಚ ಗರಂ ಆಗಿಯೇ ಹೇಳಿ ಕಾರಿನಲ್ಲಿ ಕೂರುತ್ತಾರೆ.
ಬಳಿಕ ತಮ್ಮ ಡ್ರೈವರ್ ಬಳಿಯಿಂದ ಸ್ವಲ್ಪ ಹಣ ಪಡೆದು ಮಹಿಳೆಗೆ ನೀಡುತ್ತಾರೆ. ಈ ವಿಡಿಯೋ ನೋಡಿದ ಕೆಲವರು ಆ ಬಡ ಮಹಿಳೆ ಮುಟ್ಟಿದ್ದಕ್ಕೆ ಶ್ರೇಯಸ್ ದುರುಗುಟ್ಟಿದ್ದೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರೆ, ಹೆಚ್ಚಿನವರು ಶ್ರೇಯಸ್ ವರ್ತನೆ ಸರಿಯಾಗಿಯೇ ಇದೆ. ಆಕೆಯ ಬಡತನಕ್ಕೆ ಶ್ರೇಯಸ್ ಕಾರಣವಲ್ಲ, ಹಾಗಿದ್ದರೂ ಅವರು ಹಣ ಕೊಡಬೇಕು ಎಂದು ಆಕೆ ಮುಗಿಬೀಳುವುದು ಸರಿಯಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.