ಬಾತ್ ರೂಂ ಇಲ್ಲ, ಸೀಟ್ ಇಲ್ಲ ಆದ್ರೂ ಪಾಕಿಸ್ತಾನಕ್ಕೆ ಚಾಂಪಿಯನ್ಸ್ ಟ್ರೋಫಿ ಆಯೋಜಿಸುವಾಸೆ

Krishnaveni K

ಬುಧವಾರ, 21 ಆಗಸ್ಟ್ 2024 (10:10 IST)
Photo Credit: Facebook
ಇಸ್ಲಾಮಾಬಾದ್: ಮುಂದಿನ ವರ್ಷ ಮಾರ್ಚ್ ನಲ್ಲಿ ಪಾಕಿಸ್ತಾನ ಪ್ರತಿಷ್ಠಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಆಯೋಜಿಸಲು ಹೊರಟಿದೆ. ಆದರೆ ಪಾಕಿಸ್ತಾನದ ಸ್ಟೇಡಿಯಂಗಳ ದುಸ್ಥಿತಿ ನೋಡಿದರೆ ಈ ಚಂದಕ್ಕೆ ಚಾಂಪಿಯನ್ಸ್ ಟ್ರೋಫಿ ಬೇರೆ ಕೇಡು ಎನ್ನುವಂತಿದೆ.

ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್, ಅಫ್ಘಾನಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಟಾಪ್ ತಂಡಗಳು ಭಾಗವಹಿಸುವ ಪ್ರತಿಷ್ಠಿತ ಟೂರ್ನಿ ಇದಾಗಿದೆ. ಒಂದು ರೀತಿಯಲ್ಲಿ ಮಿನಿ ವಿಶ್ವಕಪ್ ಎಂದೇ ಬಣ್ಣಿತವಾಗಿರುವ ಟೂರ್ನಿ ಇದಾಗಿದೆ. ಏಕದಿನ ಮಾದರಿಯಲ್ಲಿ ಟೂರ್ನಿ ನಡೆಯಲಿದೆ.

ಈಗಾಗಲೇ ಐಸಿಸಿಗೆ ಪಾಕ್ ಕ್ರಿಕೆಟ್ ಮಂಡಳಿ ಟೂರ್ನಿಯ ಕರಡು ವೇಳಾಪಟ್ಟಿಯನ್ನು ನೀಡಿದೆ. ಆದರೆ ಪಾಕಿಸ್ತಾನ ಗುರುತಿಸಿರುವ ಮೈದಾನಗಳ ಪರಿಸ್ಥಿತಿ ಮಾತ್ರ ಅತ್ಯಂತ ಕೆಟ್ಟದಾಗಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ಖಾನ್ ಇದೀಗ ಟೂರ್ನಿ ನಡೆಯಲಿರುವ ಮೈದಾನಗಳಿಗೆ ತೆರಳಿ ಅಲ್ಲಿನ ವ್ಯವಸ್ಥೆ ಅಂತಾರಾಷ್ಟ್ರೀಯ ಟೂರ್ನಮೆಂಟ್ ಆಯೋಜಿಸಲು ಸೂಕ್ತವಾಗಿದೆಯಾ ಎಂದು ಪರಿಶೀಲಿಸಿದ್ದಾರೆ.

ಆದರೆ ಈ ಪರಿಶೀಲನೆ ವೇಳೆ ಮೈದಾನದ ದುಸ್ಥಿತಿ ನೋಡಿ ಅವರೇ ಶಾಕ್ ಆಗಿದ್ದಾರೆ. ಭಾರತ-ಪಾಕಿಸ್ತಾನ ಪಂದ್ಯ ನಿಗದಿಯಾಗಿರುವ ಲಾಹೋರ್ ನ ಗಡಾಫಿ ಸ್ಟೇಡಿಯಂನಲ್ಲಿ ಆಸನ ವ್ಯವಸ್ಥೆ ಸರಿ ಇಲ್ಲ, ಜೊತೆಗೆ ಬಾತ್ ರೂಂ ಪರಿಸ್ಥಿತಿಯಂತೂ ಕೆಟ್ಟದಾಗಿದೆ. ಈಗಿನ ಪರಿಸ್ಥಿತಿ ಪ್ರಕಾರ ಈ ಮೈದಾನಗಳು ಅಂತಾರಾಷ್ಟ್ರೀಯ ಪಂದ್ಯ ಆಯೋಜಿಸಲು ಲಾಯಕ್ಕಿಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ. ಆದರೆ ಚಾಂಪಿಯನ್ಸ್ ಟ್ರೋಫಿ ವೇಳೆಗೆ ಮೈದಾನವನ್ನು ಮೇಲ್ದರ್ಜೆಗೇರಿಸುವುದಾಗಿ ಭರವಸೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ