ಬೆಂಗಳೂರು: ಒಂದು ಕಾಲದಲ್ಲಿ ಆರ್ ಸಿಬಿ ತಂಡದ ಪ್ರಮುಖ ಆಟಗಾರನಾಗಿದ್ದ ಮನೀಶ್ ಪಾಂಡೆಗೆ ಈಗ ಮತ್ತೆ ತಮ್ಮ ತವರು ಫ್ರಾಂಚೈಸಿಗೆ ಮರಳುವ ಆಸೆಯಾಗಿದೆಯಂತೆ. ಇದಕ್ಕೆ ಆರ್ ಸಿಬಿ ಅವಕಾಶ ನೀಡುತ್ತಾ ನೋಡಬೇಕಿದೆ.
ಐಪಿಎಲ್ 2025 ರಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಎಲ್ಲಾ ತಂಡಗಳು ಕೆಲವೊಬ್ಬ ಆಟಗಾರರನ್ನು ರಿಲೀಸ್ ಮಾಡಿ ಹೊಸ ಆಟಗಾರರನ್ನು ಖರೀದಿ ಮಾಡಲಿದೆ. ಎಲ್ಲಾ ಫ್ರಾಂಚೈಸಿಗಳಿಗೆ 6 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶವಿದೆ. ಹೀಗಾಗಿ ಸದ್ಯಕ್ಕೆ ಕೆಕೆಆರ್ ತಂಡದ ಭಾಗವಾಗಿದ್ದಾರೆ. ಇದುವರೆಗೆ 7 ಐಪಿಎಲ್ ತಂಡಗಳ ಪರ ಆಡಿರುವ ಮನೀಶ್ ಈ ಬಾರಿಯೂ ಕೆಕೆಆರ್ ತಂಡದಿಂದ ರಿಲೀಸ್ ಆಗುವುದು ಬಹುತೇಕ ಖಚಿತ.
ಇದರ ಬೆನ್ನಲ್ಲೇ ಅವರು ತಮ್ಮ ತವರು ಆರ್ ಸಿಬಿ ತಂಡದ ಪರ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ. ನಾನು ಮಾತ್ರವಲ್ಲ, ಕರ್ನಾಟಕದ ಎಲ್ಲಾ ಕ್ರಿಕೆಟಿಗರು ಒಮ್ಮೆಯಾದರೂ ಆರ್ ಸಿಬಿ ಪರ ಆಡುವ ಕನಸು ಕಾಣುತ್ತಾರೆ. ನನಗೂ ಆರ್ ಸಿಬಿ ಪರ ಮುಂದಿನ ಸೀಸನ್ ನಲ್ಲಿ ಆಡಬೇಕೆಂಬ ಬಯಕೆಯಿದೆ ಎಂದಿದ್ದಾರೆ ಮನೀಶ್. ಐಪಿಎಲ್ ನಲ್ಲಿ ಶತಕ ಸಿಡಿಸಿರುವ ಮನೀಶ್ ಪಾಂಡೆ ಇತ್ತೀಚೆಗಿನ ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಆಟವಾಡಿಲ್ಲ. ಹೀಗಾಗಿ ಆರ್ ಸಿಬಿ ಇದುವರೆಗೆ ಅವರನ್ನು ಖರೀದಿಸುವ ಆಸಕ್ತಿ ತೋರಿಲ್ಲ.
ಆದರೆ ಸದ್ಯಕ್ಕೆ ಆರ್ ಸಿಬಿಯಲ್ಲಿ ಕರ್ನಾಟಕದ ಪ್ರತಿಭೆಗಳಿಲ್ಲ ಎಂಬ ಆಪಾದನೆಗಳಿವೆ. ಆ ಕಾರಣಕ್ಕಾದರೂ ಈ ಬಾರಿ ಅವರನ್ನು ಖರೀದಿ ಮಾಡಬಹುದೇನೋ ಎಂಬ ಭರವಸೆಯಿದೆ.