ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯವಾಡಲು ಧರ್ಮಶಾಲಾದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗ ಶುಬ್ಮನ್ ಗಿಲ್ ತಮ್ಮ ಬಿಡುವಿನ ವೇಳೆಯಲ್ಲಿ ಬೌದ್ಧ ಸನ್ಯಾಸಿಗಳ ಜೊತೆ ಕಾಲ ಕಳೆದಿದ್ದಾರೆ. ಇದಕ್ಕೆ ನೆಟ್ಟಿಗರು ಎಲ್ಲಾ ಕೊಹ್ಲಿಯ ಮಹಿಮೆ ಎಂದು ಕಾಲೆಳೆದಿದ್ದಾರೆ.
ಮಾರ್ಚ್ 7 ರಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ ಧರ್ಮಶಾಲಾ ಮೈದಾನದಲ್ಲಿ ಐದನೇ ಟೆಸ್ಟ್ ಪಂದ್ಯ ನಡೆಯಲಿದೆ. ಇದಕ್ಕೆ ಈಗಾಗಲೇ ಟೀಂ ಇಂಡಿಯಾ ಇಲ್ಲಿಗೆ ಬಂದಿಳಿದಿದೆ. ಕಳೆದ ಮೂರು ಪಂದ್ಯಗಳನ್ನು ಸತತವಾಗಿ ಗೆದ್ದಿರುವ ಟೀಂ ಇಂಡಿಯಾ ಸರಣಿ ತನ್ನದಾಗಿಸಿಕೊಂಡಿದೆ. ಈ ಎಲ್ಲಾ ಪಂದ್ಯಗಳಲ್ಲಿ ಶುಬ್ಮನ್ ಗಿಲ್ ಮಹತ್ವದ ಇನಿಂಗ್ಸ್ ಆಡಿದ್ದರು.
ಇದೀಗ ಗಿಲ್ ಐದನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ. ಇದರ ನಡುವೆ ಧರ್ಮಶಾಲಾದಲ್ಲಿ ಬೌದ್ಧ ಸನ್ಯಾಸಿಗಳೊಂದಿಗೆ ಕಾಲ ಕಳೆಯುತ್ತಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಗಿಲ್ ಅವರ ಧಾರ್ಮಿಕ ಶ್ರದ್ಧೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಭಾರತ ಈ ಯಂಗ್ ಸ್ಟಾರ್ ಕ್ರಿಕೆಟಿಗನ ಧಾರ್ಮಿಕ ಶ್ರದ್ಧೆಗೆ ಕೊಹ್ಲಿಯೇ ಪ್ರೇರಣೆ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.
ವಿರಾಟ್ ಕೊಹ್ಲಿ ತಮಗೆ ಬಿಡುವು ಸಿಕ್ಕಾಗಲೆಲ್ಲಾ ಸ್ವಾಮೀಜಿಗಳು, ದೇವಾಲಯ ಎಂದು ಧಾರ್ಮಿಕ ಶ್ರದ್ಧೆ ಪ್ರಕಟಿಸುತ್ತಿರುತ್ತಾರೆ. ಇದೀಗ ಅವರದೇ ಹಾದಿಯಲ್ಲಿ ಇತರೆ ಕ್ರಿಕೆಟಿಗರು ನಡೆಯುತ್ತಿದ್ದಾರೆ. ಇವರಿಗೆಲ್ಲಾ ಕೊಹ್ಲಿಯೇ ಮಾದರಿ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.