ನ್ಯೂಯಾರ್ಕ್: ಟಿ20 ವಿಶ್ವಕಪ್ ನಲ್ಲಿ ಇಂದು ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡಲಿದೆ. ನ್ಯೂಯಾರ್ಕ್ ನಲ್ಲಿ ಈ ಪಂದ್ಯ ನಡೆಯಲಿದೆ.
ಟಿ20 ವಿಶ್ವಕಪ್ ನಲ್ಲಿ ಇದುವರೆಗೆ 8 ಆವೃತ್ತಿಗಳು ನಡೆದಿದ್ದು, ಭಾರತ ಒಮ್ಮೆ ಮಾತ್ರ ಚಾಂಪಿಯನ್ ಆಗಿದೆ. ಅದೂ ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿ ಬಾರದೇ 10 ವರ್ಷಗಳೇ ಕಳೆದಿವೆ. ಹೀಗಾಗಿ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲೇಬೇಕು ಎಂಬ ಒತ್ತಡದಲ್ಲಿ ಭಾರತ ತಂಡ ಕಣಕ್ಕಿಳಿಯುತ್ತಿದೆ. ಜೊತೆಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಇದು ಕೊನೆಯ ಟಿ20 ವಿಶ್ವಕಪ್ ಆಗಿರಬಹುದು. ಹೀಗಾಗಿ ಈ ಟೂರ್ನಿ ವಿಶೇಷವಾಗಿದೆ.
ಭಾರತ ತಂಡದಲ್ಲಿ ಆರಂಭಿಕ ಸ್ಥಾನದಲ್ಲಿ ಯಾರು ಕಣಕ್ಕಿಳಿಯಬಹುದು ಎಂಬ ಕುತೂಹಲವಿದೆ. ಕೆಲವರು ಕೊಹ್ಲಿ-ರೋಹಿತ್ ಆರಂಭ ಮಾಡಲಿ ಎಂದು ಅಭಿಪ್ರಾಯಪಟ್ಟಿದ್ದರು. ಆಧರೆ ಯಶಸ್ವಿ ಜೈಸ್ವಾಲ್ ಕೂಡಾ ತಂಡದಲ್ಲಿರುವುದರಿಂದ ರೋಹಿತ್ ಜೊತೆಗೆ ಓಪನರ್ ಆಗಿ ಕಣಕ್ಕಿಳಿಯುವವರು ಯಾರು ಎಂಬ ಕುತೂಹಲವಿದೆ.
ಇನ್ನೊಂದೆಡೆ ವಿಕೆಟ್ ಕೀಪರ್ ಸ್ಥಾನಕ್ಕೂ ಸಂಜು ಸ್ಯಾಮ್ಸನ್ ಮತ್ತು ರಿಷಬ್ ಪಂತ್ ನಡುವೆ ತೀವ್ರ ಪೈಪೋಟಿಯಿತ್ತು. ಆದರೆ ಅಭ್ಯಾಸ ಪಂದ್ಯದಲ್ಲಿ ರಿಷಬ್ ಮಿಂಚಿದ್ದರು. ಹೀಗಾಗಿ ಸಂಜು ಹೊರಗುಳಿಯುವ ಸಾಧ್ಯತೆ ಹೆಚ್ಚು. ಬೌಲಿಂಗ್ ವಿಭಾಗದಲ್ಲಿ ಮೂವರು ವೇಗಿಗಳು ಒಬ್ಬ ಸ್ಪಿನ್ನರ್ ಎಂದು ಕಣಕ್ಕಿಳಿಯುವುದಾದರೆ ಬುಮ್ರಾ, ಅರ್ಷ್ ದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆಯಬಹುದು. ನಿಜ ಹೇಳಬೇಕೆಂದರೆ ಈ ಬಾರಿ ಬೌಲಿಂಗ್ ವಿಭಾಗದಲ್ಲಿ ಹೆಚ್ಚು ಪೈಪೋಟಿಯಿದೆ. ಉಳಿದಂತೆ ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಬಹುದು. ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ನಡುವೆ ಆಯ್ಕೆ ಮಾಡಬೇಕಾಗಿ ಬಂದರೆ ಹಾರ್ದಿಕ್ ಗೆ ಮೊದಲ ಪ್ರಾಶಸ್ತ್ಯ ಸಿಗುವ ಸಾಧ್ಯತೆ ಹೆಚ್ಚು. ಇಂದಿನ ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ನಡೆಯಲಿದ್ದು ಡಿಸ್ನಿ ಹಾಟ್ ಸ್ಟಾರ್ ಆಪ್ ಮತ್ತು ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.