ಬಾರ್ಬಡೋಸ್: ಟಿ20 ವಿಶ್ವಕಪ್ 2024 ಚಾಂಪಿಯನ್ ಆದ ಬಳಿಕ ನಾಯಕ ರೋಹಿತ್ ಶರ್ಮಾ ಭಾವುಕರಾಗಿ ಮಾತನಾಡಿದ್ದಾರೆ. ಇದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ನಾವು ಸಾಕಷ್ಟು ಒತ್ತಡದ ಪಂದ್ಯಗಳನ್ನು ಆಡಿದ್ದೇವೆ. ಆದರೆ ಪ್ರತೀ ಬಾರಿಯೂ ನಾವು ಸೋಲಿನ ದಡದಲ್ಲಿದ್ದೆವು. ಆದರೆ ಇದರಿಂದ ಎಲ್ಲರೂ ಒತ್ತಡವನ್ನು ಎದುರಿಸುವುದು ಹೇಗೆ ಎಂದು ಕಲಿತೆವು. ಎಲ್ಲರೂ ಇಂತಹ ಒಂದು ಗೆಲುವಿಗಾಗಿ ಕಾದಿದ್ದರು. ನಾನು ಈ ತಂಡದ ಬಗ್ಗೆ ಹೆಮ್ಮೆಪಡುತ್ತೇನೆ. ಎಲ್ಲರ ಶ್ರಮದಿಂದ ನಾವು ಗೆದ್ದಿದ್ದೇವೆ.
ವಿರಾಟ್ ಫಾರ್ಮ್ ಬಗ್ಗೆ ಯಾರಿಗೂ ಸಂಶಯವಿರಲಿಲ್ಲ. ಅವರು ಕಮ್ ಬ್ಯಾಕ್ ಮಾಡುತ್ತಾರೆ ಎಂದು ಎಲ್ಲರಿಗೂ ಗೊತ್ತಿತ್ತು. ಅವರು ಕಳೆದ 15 ವರ್ಷದಿಂದ ಇದನ್ನು ಮಾಡುತ್ತಲೇ ಬಂದಿದ್ದಾರೆ. ಈ ಮೊತ್ತ ಗಳಿಸಲು ಸಾಧ್ಯವಾಗಿದ್ದು ಎಲ್ಲರ ಶ್ರಮದ ಫಲವಾಗಿದೆ. ಇಂದು ಒಬ್ಬರು ಸುದೀರ್ಘ ಕಾಲ ಬ್ಯಾಟ್ ಮಾಡಬೇಕಿತ್ತು. ಇದನ್ನು ಇಂದು ಕೊಹ್ಲಿ ಮಾಡಿದರು. ಅಕ್ಷರ್ ಕೊಡುಗೆಯನ್ನೂ ಮರೆಯುವಂತಿಲ್ಲ.
ಜಸ್ಪ್ರೀತ್ ಬುಮ್ರಾರನ್ನು ನಾನು ಹಲವು ವರ್ಷಗಳಿಂದ ನೋಡುತ್ತಿದ್ದೇನೆ, ಜೊತೆಗೆ ಆಡುತ್ತಿದ್ದೇವೆ. ಆದರೆ ಅವರು ತಂಡಕ್ಕಾಗಿ ನೀಡುವ ಕೊಡುಗೆ ನಿಜಕ್ಕೂ ಮಾಸ್ಟರ್ ಕ್ಲಾಸ್. ಹಾರ್ದಿಕ್ ಕೂಡಾ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು. ನ್ಯೂಯಾರ್ಕ್ ನಿಂದ ಬಾರ್ಬಡೋಸ್ ವರೆಗೆ ಬಂದು ನಮಗೆ ಬೆಂಬಲ ನೀಡಿದ ಅಭಿಮಾನಿಗಳು, ಭಾರತದಲ್ಲಿ ಮಧ್ಯರಾತ್ರಿಯೂ ಟಿವಿ ವೀಕ್ಷಣೆ ಮಾಡುತ್ತಿರುವ ಕೋಟ್ಯಂತರ ಭಾರತೀಯರಿಗೆ ಈ ಕಪ್ ಅರ್ಪಣೆ ಎಂದಿದ್ದಾರೆ.