Photo Credit: BCCI
ಬಾರ್ಬಡೋಸ್: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಿಯೇ ಆಡುತ್ತಾರೆ ಎಂದು ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್ ವಿಶ್ವಾಸದಿಂದಲೇ ಹೇಳಿದ್ದರು. ಆ ಮಾತನ್ನು ಇಂದು ಕೊಹ್ಲಿ ಉಳಿಸಿಕೊಂಡರು.
ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ತನ್ನ ಕ್ಲಾಸ್ ತೋರಿಸಿದ ವಿರಾಟ್ ಕೊಹ್ಲಿ ಭಾರತ ತಂಡ ಗೌರವಯುತ ಮೊತ್ತ ಗಳಿಸಲು ನೆರವಾದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ ವಿಕೆಟ್ ನಷ್ಟಕ್ಕೆ ರನ್ ಗಳಿಸಿತು.
ಆರಂಭದಲ್ಲೇ ರೋಹಿತ್ ಶರ್ಮಾ, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್ ಅವರ ಬಿಗ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾದ ತಂಡಕ್ಕೆ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಆಸರೆಯಾದರು. ಅಕ್ಷರ್ ಕ್ರೀಸ್ ನಲ್ಲಿರುವವರೆಗೆ ನಿಧಾನಗತಿಯಲ್ಲಿ ಆಡಿದ ಕೊಹ್ಲಿ ಅವರು ಔಟಾದ ಬಳಿಕ ಕೊಂಚ ಬಿರುಸಿನ ಆಟಕ್ಕೆ ಕೈ ಹಾಕಿದರು. ಅಕ್ಷರ್ ಮಧ್ಯಮ ಕ್ರಮಾಂಕದಲ್ಲಿ 31 ಎಸೆತಗಳಿಂದ 47 ರನ್ ಗಳಿಸಿ ಉಪಯುಕ್ತ ಕಾಣಿಕೆ ನೀಡಿದರು. ಅರ್ಧಶತಕದ ಅಂಚಿನಲ್ಲಿ ಅವರು ರನೌಟ್ ಆಗಿ ನಿರಾಸೆ ಅನುಭವಿಸಬೇಕಾಯಿತು.
ಆದರೆ ಇನ್ನೊಂದೆಡೆ ದೃಢವಾಗಿ ನಿಂತು ಆಡಿದ ಕೊಹ್ಲಿ ಒಟ್ಟು 59 ಎಸೆತ ಎದುರಿಸಿ 2 ಸಿಕ್ಸರ್ ಗಳೊಂದಿಗೆ 76 ರನ್ ಗಳಿಸಿ 19 ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ಅಕ್ಷರ್ ಔಟಾದ ಬಳಿಕ ಕೊಹ್ಲಿಗೆ ಸಾಥ್ ನೀಡಿದ ಶಿವಂ ದುಬೆ 16 ಎಸೆತಗಳಿಂದ 27 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಕೇಶವ್ ಮಹಾರಾಜ್, ನೋರ್ಜೆ ತಲಾ 2 ವಿಕೆಟ್ ಕಬಳಿಸಿದರು. ಅಂತಿಮವಾಗಿ ಭಾರತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಆಫ್ರಿಕಾ ಗೆಲುವಿಗೆ 177 ರನ್ ಗಳ ಗುರಿ ನಿಗದಿಪಡಿಸಿತು.