T20 World Cup 2024: 11 ವರ್ಷದ ಶಾಪ ಕಳೆಯಿತು, ಟೀಂ ಇಂಡಿಯಾಗೆ ಒಲಿಯಿತು ಟಿ20 ವಿಶ್ವಕಪ್

Krishnaveni K

ಶನಿವಾರ, 29 ಜೂನ್ 2024 (23:41 IST)
ಬಾರ್ಬಡೋಸ್: 11 ವರ್ಷಗಳ ಕಾಯುವಿಕೆ.. ಕೋಟ್ಯಾಂತರ ಭಾರತೀಯರ ಕನಸು ಇಂದು ನನಸಾದ ಗಳಿಗೆ… ಆ ಕ್ಷಣ ಭಾರತೀಯ ಆಟಗಾರರು, ಪ್ರೇಕ್ಷಕರು, ಅಭಿಮಾನಿಗಳ ಕಣ್ಣಂಚಲ್ಲಿ ನೀರು.. ಕೊನೆಗೂ ಭಾರತ ಮತ್ತೊಮ್ಮೆ ಟಿ20 ವಿಶ್ವ ಚಾಂಪಿಯನ್ ಆಯಿತು.

ಟಿ20 ವಿಶ್ವಕಪ್ ಫೈನಲ್ ಗೆ ಬೇಕಾಗಿದ್ದ ಎಲ್ಲಾ ರೋಚಕತೆಯೂ ಈ ಪಂದ್ಯದಲ್ಲಿತ್ತು. ಒಂದು ಹಂತದಲ್ಲಿ ಭಾರತ ಮತ್ತೊಮ್ಮೆ ಫೈನಲ್ ನಲ್ಲಿ ಸೋಲಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಲೆಕ್ಕಾಚಾರವನ್ನು ತಲೆಕೆಳಗು ಮಾಡಿ ಒತ್ತಡದಲ್ಲೂ ತಾಳ್ಮೆ ಕಳೆದುಕೊಳ್ಳದೇ ಬೌಲಿಂಗ್ ಮಾಡಿ ಭಾರತಕ್ಕೆ ಇಂದು ಗೆಲುವು ತಂದುಕೊಟ್ಟ ಹೆಮ್ಮೆ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾಗೆ ಸಲ್ಲಬೇಕು.

ಭಾರತ ನೀಡಿದ 177 ರನ್ ಗಳ ಗೆಲುವಿನ ಗುರಿ ಬೆನ್ನತ್ತಿ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆಯದೇ ಇದ್ದರೂ ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸನ್, ಡೇವಿಡ್ ಮಿಲ್ಲರ್ ಭಾರತದ ಗೆಲುವು ಕಸಿದುಕೊಳ್ಳುವ ಅಪಾಯ ತಂದೊಡ್ಡಿದ್ದರು. ಆದರೆ ಸ್ಪಿನ್ನರ್ ಗಳು ಕೈಕೊಟ್ಟರೂ ವೇಗಿಗಳು ಇಂದು ತಮ್ಮ ಅನುಭವವನ್ನೆಲ್ಲಾ ಧಾರೆಯೆರೆದರು. ಹೆನ್ರಿಚ್ ಕ್ಲಾಸನ್, ಡೇವಿಡ್ ಮಿಲ್ಲರ್ ರನ್ನು ಹಾರ್ದಿಕ್ ಬಲಿ ಪಡೆದಾಗ ಪಂದ್ಯ ತಿರುವು ಪಡೆಯಿತು.

ಅಂತಿಮವಾಗಿ ದ. ಆಫ್ರಿಕಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಶಕ್ತವಾಯಿತು. ಗೆಲುವಿನ ಬಳಿಕ ರೋಹಿತ್, ವಿರಾಟ್, ಹಾರ್ದಿಕ ಸೇರಿದಂತೆ ಪ್ರತಿಯೊಬ್ಬ ಟೀಂ ಇಂಡಿಯಾ ಆಟಗಾರರೂ ಸಂತೋಷದಿಂದ ಕಣ್ಣೀರು ಮಿಡಿದಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ