ಮುಂಬೈ: ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ ಐತಿಹಾಸಿಕ ಟೆಸ್ಟ್ ಗೆಲುವು ಕಂಡ ಬೆನ್ನಲ್ಲೇ ಟೀಂ ಇಂಡಿಯಾಗೆ ಈಗ ಡಬ್ಲ್ಯುಟಿಸಿ ಶ್ರೇಯಾಂಕ ಪಟ್ಟಿಯಲ್ಲಿ ಆತಂಕ ಎದುರಾಗಿದೆ.
ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಬಾಂಗ್ಲಾದೇಶಕ್ಕೆ ಮುಂದೆ ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಸರಣಿ ಆಡಬೇಕಿದೆ. ಸದ್ಯಕ್ಕೆ ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್ ಶಿಪ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದೆ. ಒಂದು ವೇಳೆ ಬಾಂಗ್ಲಾದೇಶ ವಿರುದ್ಧ ಲೆಕ್ಕಾಚಾರ ತಪ್ಪಿ ಟೀಂ ಇಂಡಿಯಾ ಏನಾದರೂ ಸೋತು ಹೋದರೆ ಅಗ್ರ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ.
ಯಾವ ತಂಡವನ್ನೂ ಹಗುರವಾಗಿ ಕಾಣುವ ಪರಿಸ್ಥಿತಿಯಲ್ಲಿ ಭಾರತವಿಲ್ಲ. ಕಳೆದ ಬಾರಿ ಶ್ರೀಲಂಕಾ ನೆಲದಲ್ಲಿ ಘಟಾನುಘಟಿ ಆಟಗಾರರಿದ್ದರೂ ಟೀಂ ಇಂಡಿಯಾ ಏಕದಿನ ಸರಣಿ ಸೋಲು ಅನುಭವಿಸಬೇಕಾಗಿತು ಬಂತು. ಹೀಗಾಗಿ ಮುಂಬರುವ ಬಾಂಗ್ಲಾದೇಶದ ಸರಣಿ ಭಾರತಕ್ಕೆ ಮಹತ್ವದ್ದಾಗಿದೆ.
ಒಂದು ವೇಳೆ ಭಾರತ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಬಾಂಗ್ಲಾ ಮಣಿಸಿದರೆ ಅಗ್ರ ಪಟ್ಟ ಉಳಿಯಲಿದೆ. ಎರಡೂ ಪಂದ್ಯಗಳು ಡ್ರಾ ಆದರೆ ಅಗ್ರ ಪಟ್ಟವನ್ನು ಆಸ್ಟ್ರೇಲಿಯಾಕ್ಕೆ ಬಿಟ್ಟುಕೊಡಬೇಕಾಗುತ್ತದೆ. ಒಂದು ವೇಳೆ ಒಂದು ಟೆಸ್ಟ್ ಗೆದ್ದು, ಇನ್ನೊಂದು ಡ್ರಾ ಮಾಡಿಕೊಂಡರೂ ಅಗ್ರ ಸ್ಥಾನದಲ್ಲಿ ಮುಂದುವರಿಯಬಹುದು. ಒಂದು ವೇಳೆ ಭಾರತ ಒಂದು ಪಂದ್ಯ ಸೋತು, ಇನ್ನೊಂದನ್ನು ಡ್ರಾ ಮಾಡಿಕೊಂಡರೆ ಎರಡನೇ ಸ್ಥಾನಕ್ಕೆ ಜಾರಲಿದೆ. ಒಂದು ವೇಳೆ ಎರಡೂ ಟೆಸ್ಟ್ ಸೋತರೆ ಆಸ್ಟ್ರೇಲಿಯಾ ನಂ1, ಬಾಂಗ್ಲಾದೇಶ ನಂ2 ಮತ್ತು ಭಾರತ ಮೂರನೇ ಸ್ಥಾನಕ್ಕಿಳಿಯಲಿದೆ.