WTC Ranking: ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಟೀಂ ಇಂಡಿಯಾ ನಂ.1
ಸೋಮವಾರ, 18 ಡಿಸೆಂಬರ್ 2023 (10:49 IST)
ದುಬೈ: ವಿಶ‍್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಟೀಂ ಇಂಡಿಯಾ ನಂ.1 ಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಸೋತ ಬೆನ್ನಲ್ಲೇ ಭಾರತಕ್ಕೆ ಲಾಭವಾಗಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಸತತ ಎರಡು ವರ್ಷಗಳಿಂದ ಫೈನಲ್ ಗೇರಿರುವ ಭಾರತ ಎರಡು ಬಾರಿಯೂ ರನ್ನರ್ ಅಪ್ ಆಗಿತ್ತು. ಈಗ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಪ್ರಸಕ್ತ ನಡೆಯುತ್ತಿರುವ ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಪಾಕ್ ಕನಿಷ್ಠ ಒಂದು ಪಂದ್ಯವನ್ನಾದರೂ ಗೆದ್ದರೆ ಮಾತ್ರ ಡಬ್ಲ್ಯುಟಿಸಿ ರೇಸ್ ನಲ್ಲಿ ಉಳಿಯಬಹುದಾಗಿದೆ. ಇಲ್ಲದೇ ಹೋದರೆ ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಲಿದೆ.
ಡಬ್ಲ್ಯುಟಿಸಿ ಶ್ರೇಯಾಂಕದಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳಿಗೆ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವಾಡುವ ಅರ್ಹತೆ ಸಿಗುತ್ತದೆ. ಭಾರತ ಈ ಸೀಸನ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮಾತ್ರ ಟೆಸ್ಟ್ ಪಂದ್ಯವಾಡಿದ್ದು ಅದರಲ್ಲಿ ಗೆಲುವು ಕಂಡಿತ್ತು. ಹೀಗಾಗಿ ಭಾರತದ ಗೆಲುವಿನ ಶೇಕಡಾವಾರು 66.67 ರಷ್ಟಿದೆ. ಇದೀಗ ನಡೆಯಲಿರುವ ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಮತ್ತು ಬಳಿಕ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗೆದ್ದು ಡಬ್ಲ್ಯುಟಿಸಿ ರೇಸ್ ನಲ್ಲಿ ಭಾರತ ಟಾಪ್ ನಲ್ಲಿ ಉಳಿಯುವ ನಿರೀಕ್ಷೆಯಿದೆ.