ಮುಂಬೈ: ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾದಂತಹ ಕ್ರಿಕೆಟ್ ದೈತ್ಯರು ಒಂದು ಕಾಲದಲ್ಲಿ ಕ್ರಿಕೆಟ್ ಜಗತ್ತಿನ ದೊರೆಗಳಾಗಿ ಮೆರೆದು ಕೊನೆಗೆ ಅವನತಿಯತ್ತ ಸಾಗಿದ್ದನ್ನು ನೋಡಿದ್ದೇವೆ. ಇದೀಗ ಟೀಂ ಇಂಡಿಯಾ ಪರಿಸ್ಥಿತಿಯೂ ಇದೇ ರೀತಿಯಾಗಿದೆ.
ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ ರೋಹಿತ್ ಶರ್ಮಾಗೆ ನಾಯಕತ್ವ ನೀಡಲಾಯಿತು. ಆದರೆ ಅಲ್ಲಿಯವರೆಗೆ ಉಭಯ ದೇಶಗಳ ಸರಣಿಯನ್ನಾದರೂ ಗೆಲ್ಲುತ್ತಿದ್ದ ಟೀಂ ಇಂಡಿಯಾ ಇತ್ತೀಚೆಗೆ ಸೋಲುವುದನ್ನೇ ಅಭ್ಯಾಸ ಮಾಡಿಕೊಂಡಂತಿದೆ. ಇದಕ್ಕೆ ನಾಯಕತ್ವದಿಂದ ರೋಹಿತ್ ರನ್ನು ಕೆಳಗಿಳಿಸಬೇಕು, ದ್ರಾವಿಡ್ ರನ್ನು ಕೋಚ್ ಸ್ಥಾನದಿಂದ ಕಿತ್ತು ಹಾಕಬೇಕು ಎಂಬ ಆಕ್ರೋಶ ಕೇಳಿಬರುತ್ತಿದೆ.
ಆದರೆ ಅಸಲಿಗೆ, ಈ ಎಲ್ಲಾ ಸೋಲಿಗೆ ಕಾರಣವಾಗಿರುವುದು ಕೇವಲ ಇವರಿಬ್ಬರು ಅಲ್ಲ. ವಿರಾಟ್-ರವಿಶಾಸ್ತ್ರಿ ಕಾಲದ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಿರ ಸದಸ್ಯರೇ ಇಲ್ಲ. ಪ್ರತೀ ಸರಣಿಗೂ ಹೊಸ ಆಟಗಾರರು, ಹೊಸ ನಾಯಕ. ಹಿರಿಯರಿಗೆ ಅತಿಯಾಗಿ ವಿಶ್ರಾಂತಿ ನೀಡುವುದು ಇತ್ಯಾದಿ ಹೆಚ್ಚಿದೆ. ಒಂದೇ ಒಂದು ಸರಣಿಯಲ್ಲಿ ಪೂರ್ಣ ಪ್ರಮಾಣದ ತಂಡ ಆಡಿದ್ದೇ ಇಲ್ಲ! ಈ ಅತಿಯಾದ ಪ್ರಯೋಗ ವಿಶ್ವಕಪ್ ದೃಷ್ಟಿಯಿಂದ ಎಂದು ಈ ಮೊದಲು ಕಾರಣ ನೀಡಲಾಗುತ್ತಿತ್ತು. ಆದರೆ ಅದರಿಂದ ಪ್ರಯೋಜನವೇನೂ ಆಗಲಿಲ್ಲ. ಎಷ್ಟೇ ವಿಶ್ರಾಂತಿ ನೀಡಿದರೂ ಪ್ರಮುಖ ಬೌಲರ್ ಗಳಾದ ಬುಮ್ರಾ, ರವೀಂದ್ರ ಜಡೇಜಾ ಗಾಯಗೊಂಡು ತಂಡದಿಂದ ಹೊರಗುಳಿಯಬೇಕಾಯಿತು. ಅಲ್ಲಿಗೆ ರೊಟೇಷನ್ ಪದ್ಧತಿ ಎಂಬ ಹೆಸರಿನಲ್ಲಿ ಪದೇ ಪದೇ ಆಟಗಾರರನ್ನು, ನಾಯಕನನ್ನು ಬದಲಾಯಿಸಿರುವುದರಿಂದ ಎಳ್ಳಷ್ಟೂ ಪ್ರಯೋಜನವಾಗಿಲ್ಲ.
ಇನ್ನು, ಈಗಿನ ಟೀಂ ಇಂಡಿಯಾದಲ್ಲಿ ಬೌಲಿಂಗ್ ವಿಭಾಗ ಸ್ಟ್ರಾಂಗ್ ಮಾಡುವ ಯಾವುದೇ ಪ್ರಯತ್ನವೂ ನಡೆಯುತ್ತಿಲ್ಲ. ಯುವ ಬೌಲರ್ ಗಳನ್ನೇ ನಂಬಿಕೊಂಡು ಟೂರ್ನಿಗಳನ್ನು ಆಡಲಾಗುತ್ತಿದೆ. ಇದರಿಂದಲೇ ಬೌಲಿಂಗ್ ವಿಭಾಗ ದುರ್ಬಲವಾಗಿದ್ದು, ದುರ್ಬಲ ಎದುರಾಳಿಗಳೂ ಟೀಂ ಇಂಡಿಯಾ ವಿರುದ್ಧ ಭರ್ಜರಿ ರನ್ ಗಳಿಸುತ್ತಿದ್ದಾರೆ. ಇವೆಲ್ಲವನ್ನೂ ಬಿಟ್ಟು ಮೊದಲಿನಂತೇ ಎಲ್ಲಾ ಪ್ರಮುಖರನ್ನೂ ಪ್ರತೀ ಪಂದ್ಯದಲ್ಲಿ ಆಡಿಸುವುದು, ಒಂದು ಸ್ಥಿರ ತಂಡ ಕಟ್ಟುವ ಪ್ರಯತ್ನ ನಡೆದರೆ ಮಾತ್ರ ಭಾರತ ತಂಡಕ್ಕೆ ಯಶಸ್ಸು ಸಿಗಬಹುದು. ಇಲ್ಲದೇ ಹೋದರೆ ಸೋಲು ಸಾಮಾನ್ಯವಾಗಬಹುದು.