ಅಹಮ್ಮದಾಬಾದ್: ಐಪಿಎಲ್ 2024 ರ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೂತನ ನಾಯಕ ಹಾರ್ದಿಕ್ ಪಾಂಡ್ಯ, ಮಾಜಿ ನಾಯಕ ರೋಹಿತ್ ಶರ್ಮಾ ಜೊತೆಗೆ ನಡೆದುಕೊಂಡ ರೀತಿ ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದೆ.
ಗೆಲ್ಲಬೇಕಿದ್ದ ಈ ಪಂದ್ಯವನ್ನು ಮುಂಬೈ 6 ರನ್ ಗಳಿಂದ ಸೋತಿದೆ. ಈ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಹಾರ್ದಿಕ್ ಪಾಂಡ್ಯ ಹಿರಿಯ ಆಟಗಾರ ರೋಹಿತ್ ಶರ್ಮಾಗೆ ನಿರ್ದೇಶನ ಮಾಡುತ್ತಿದ್ದ ರೀತಿ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. ರೋಹಿತ್ ಶರ್ಮಾರನ್ನು ಬೇಕೆಂದೇ ಟಾರ್ಗೆಟ್ ಮಾಡಿದ್ದಾರೆ ಎಂದು ಪ್ರೇಕ್ಷಕರು ಆರೋಪಿಸಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಟಾಸ್ ಗೆದ್ದು ಮುಂಬೈ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಸಾಮಾನ್ಯವಾಗಿ ಜಸ್ಪ್ರೀತ್ ಬುಮ್ರಾ ಓಪನಿಂಗ್ ಸ್ಪೆಲ್ ಮಾಡುತ್ತಾರೆ. ಆದರೆ ಬುಮ್ರಾಗೆ ಬಾಲ್ ನೀಡದೇ ತಾವೇ ಬೌಲಿಂಗ್ ಗಿಳಿದು ಎದುರಾಳಿಗಳಿಂದ ಚೆನ್ನಾಗಿ ಚಚ್ಚಿಸಿಕೊಂಡರು.
ಬಳಿಕ ಫೀಲ್ಡಿಂಗ್ ಸೆಟ್ ಮಾಡುವಾಗ ರೋಹಿತ್ ಶರ್ಮಾರನ್ನು ಮೈದಾನದ ಮೂಲೆ ಮೂಲೆಗೂ ಕಳುಹಿಸಿ ಪ್ರಯೋಗ ನಡೆಸಿದರು. ಹಿರಿಯ ಆಟಗಾರ ರೋಹಿತ್ ಸಾಮಾನ್ಯವಾಗಿ ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುತ್ತಾರೆ. ಬೌಂಡರಿ ಲೈನ್ ಬಳಿ ಯುವ ಆಟಗಾರರನ್ನು ಫೀಲ್ಡಿಂಗ್ ಗೆ ನಿಲ್ಲಿಸಲಾಗುತ್ತದೆ.
ಆದರೆ ಪಾಂಡ್ಯ ರೋಹಿತ್ ರನ್ನು 30 ಯಾರ್ಡ್ ಹೊರಗೆಯೇ ಫೀಲ್ಡಿಂಗ್ ಗೆ ನಿಲ್ಲಿಸಿದ್ದರು. ಒಂದು ಹಂತದಲ್ಲಿ ಫ್ರಂಟ್ ಲೈನ್ ನಲ್ಲಿದ್ದ ರೋಹಿತ್ ರನ್ನು ಹಿಂದಕ್ಕೆ ಹೋಗುವಂತೆ ಪಾಂಡ್ಯ ಸೂಚಿಸಿದಾಗ ಕನ್ ಫ್ಯೂಸ್ ಆದ ರೋಹಿತ್ ನಾನಾ ಎಂದು ಕೇಳಿದರು. ಅದಕ್ಕೆ ಹೌದು, ನೀನೇ, ಹಿಂದೆ ಹೋಗು ಎನ್ನುವಂತೆ ಸನ್ನೆ ಮಾಡಿದರು. ಅದರಂತೆ ರೋಹಿತ್ ಬೌಂಡರಿ ಲೈನ್ ಬಳಿ ತೆರೆಳಿದರು.
ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಹಾರ್ದಿಕ್ ಪಾಂಡ್ಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 5 ಬಾರಿ ಇದೇ ತಂಡಕ್ಕೆ ಐಪಿಎಲ್ ಗೆಲ್ಲಿಸಿಕೊಟ್ಟ ನಾಯಕನನ್ನು ನಡೆಸಿಕೊಳ್ಳುವ ರೀತಿ ಇದೇನಾ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಾಮಾನ್ಯವಾಗಿ ರೋಹಿತ್ ಮೈದಾನದಲ್ಲಿ ಜಾಲಿಯಾಗಿರುತ್ತಾರೆ. ಆದರೆ ಈ ಪಂದ್ಯದಲ್ಲಿ ಅವರ ಮುಖದಲ್ಲಿ ಗೊಂದಲವೇ ಎದ್ದು ಕಾಣುತ್ತಿತ್ತು.